ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 20 : ಕೃಷಿಯನ್ನು ಸಂಪೂರ್ಣವಾಗಿ ನಾಶಪಡಿಸಿರುವ ಪ್ರಧಾನಿ ನರೇಂದ್ರಮೋದಿ ಹಾಗೂ ಮಿತ್ರ ಪಕ್ಷಗಳಿಗೆ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮತ ಹಾಕಬಾರದೆಂದು ಜನತೆಯಲ್ಲಿ ಜಾಗೃತಿಗೊಳಿಸುವುದಕ್ಕಾಗಿ ಹತ್ತು ಲಕ್ಷ ಕರಪತ್ರಗಳನ್ನು ಪ್ರತಿ ಮನೆ ಮನೆಗೆ ಹಂಚಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾಮಿನಾಥನ್ ವರದಿ ಜಾರಿಗೊಳಿಸಿ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಹೇಳಿದ ಪ್ರಧಾನಿ ನರೇಂದ್ರಮೋದಿ ರೈತರ ಕೃಷಿ ಜಮೀನುಗಳನ್ನು ಕಾರ್ಪೊರೇಟ್ ವಲಯಕ್ಕೆ ಕೊಡಲು ಮುಂದಾಗಿದ್ದಾರೆ.
ಮೂರು ರೈತ ವಿರೋಧಿ ಕರಾಳ ಕಾಯಿದೆಗಳನ್ನು ಹಿಂದಕ್ಕೆ ಪಡೆಯುವಂತೆ ದೆಹಲಿಯಲ್ಲಿ ಹದಿಮೂರು ತಿಂಗಳುಗಳ ಕಾಲ ರೈತರು ಚಳುವಳಿಯಲ್ಲಿ ತೊಡಗಿದಾಗ ಮಾನವೀಯತೆಯಿಂದಲಾದರೂ ಪ್ರಧಾನಿ ಬಂದು ಸಮಸ್ಯೆಗಳನ್ನು ಕೇಳಬಹುದಿತ್ತು. 754 ರೈತರು ಚಳುವಳಿಯಲ್ಲಿ ಪ್ರಾಣಬಿಟ್ಟಿದ್ದನ್ನು ಲೆಕ್ಕಿಸದೆ ವಿದ್ಯುತ್ ಖಾಸಗೀಕರಣದ ಕಾಯಿದೆ ಪಾಸ್ ಮಾಡಿತು. ಬಿಜೆಪಿ. ಮತ್ತು ಮಿತ್ರ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಮತ ಹಾಕದಂತೆ 544 ಸಂಘಟನೆಗಳು ತೀರ್ಮಾನ ತೆಗೆದುಕೊಂಡಿರುವುದರಿಂದ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಹತ್ತು ಲಕ್ಷ ಕರಪತ್ರಗಳನ್ನು ಮನೆಗಳಿಗೆ ವಿತರಿಸಿ ಬಿಜೆಪಿ. ಮತ್ತು ಮಿತ್ರ ಪಕ್ಷಗಳಿಗೆ ಮತ ಹಾಕದಂತೆ ಜನತೆಯನ್ನು ವಿನಂತಿಸುವುದಾಗಿ ತಿಳಿಸಿದರು.
ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ನರೇಂದ್ರಮೋದಿ ದೇವರುಗಳನ್ನು ಬೀದಿಗೆ ತಂದು ಜಾತಿ ಧರ್ಮಗಳ ನಡುವೆ ಸಂಘರ್ಷವಿಡುವುದನ್ನು ಬಿಟ್ಟರೆ ಅಭಿವೃದ್ದಿ ಏನು ಆಗಿಲ್ಲ. ಹಾಗಾಗಿ ಪಾರ್ಲಿಮೆಂಟ್ ಚುನಾವಣೆಯನ್ನು ಆಂದೋಲನವಾಗಿ ತೆಗೆದುಕೊಂಡಿದ್ದು, ಕೋಮುವಾದಿ ಬಿಜೆಪಿ. ಹಾಗೂ ಮಿತ್ರ ಪಕ್ಷಗಳಿಗೆ ಮತ ಹಾಕಬಾರದೆಂದು ರೈತರು ಹಾಗೂ ಜನಸಾಮಾನ್ಯರಲ್ಲಿ ಮನವಿ ಮಾಡುವುದಾಗಿ ವೀರಸಂಗಯ್ಯ ಹೇಳಿದರು.
ರೈತ ಮುಖಂಡರುಗಳಾದ ಚಂದ್ರಶೇಖರ್, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮಂಜುನಾಥ್, ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ, ಶಿವಕುಮಾರ್, ಅಪ್ಪಣ್ಣ, ತಿಪ್ಪೇಸ್ವಾಮಿ, ಮೇಟಿಕುರ್ಕೆ ತಿಪ್ಪೇಸ್ವಾಮಿ, ಧನಂಜಯ, ಕೆ.ಸಿ.ಹೊರಕೇರಪ್ಪ, ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.