ಉಡುಪಿ: ಹಾವೇರಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಈಶ್ವರಪ್ಪ ಅವರಿಗೆ ಬಿಜೆಪಿ ನಿರಾಸೆ ಮಾಡಿದಾಗಿನಿಂದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಕ್ಕಳ ಮೇಲೆ ಹರಿಹಾಯುತ್ತಲೇ ಇದ್ದಾರೆ. ಬಿಜೆಪಿ ನಾಯಕರ ಮಾತನ್ನು ಮೀರಿ, ಸದ್ಯ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೀಗ ಪ್ರಚಾರದ ನಡುವಲ್ಲೂ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಇನ್ನು ಎಳಸು, ರಾಜಕೀಯ ಜ್ಞಾನ ಇಲ್ಲದವನು ಎಂದು ಜರಿದಿದ್ದಾರೆ.
ಪಕ್ಷಕ್ಕೆ ಈಶ್ವರಪ್ಪ ಕೊಡುಗೆ ಏನು ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ ಎಂದಾಗ ಈಶ್ವರಪ್ಪ ಕೆಂಡಾಮಂಡಲರಾಗಿದ್ದಾರೆ ನಾಲ್ಕು ದಶಕಗಳ ಕಾಲ ಪಕ್ಷಕ್ಕಾಗಿ ಅವರಪ್ಪನ ಜೊತೆಗೆ ಕೆಲಸ ಮಾಡಿದ್ದೇನೆ. ಅವನು ಹೋಗಿ ಅವರಪ್ಪ ಹಾಗೂ ಅವರ ಅಣ್ಣನಿಗೆ ನನ್ನ ಬಗ್ಗೆ ಕೇಳಲಿ. ಒಂದು ವೇಳೆ ಯಡಿಯೂರಪ್ಪ ಸಹ ನನ್ನ ಕೊಡುಗೆ ನಗಣ್ಯ ಎಂದು ಹೇಳಿದರೆ, ಆಗ ಅಪ್ಪ-ಮಗ ಇಬ್ಬರಿಗೂ ಉತ್ತರ ಕೊಡುತ್ತೇನೆ.
6 ತಿಂಗಳು ದೆಹಲಿಯಲ್ಲಿ ಕೂತು ಅವರಿವರ ಕಾಲು ಹಿಡಿದು ಅಧ್ಯಕ್ಷನಾದವನಿಗೆ ರಾಜಕೀಯ ಏನು ಗೊತ್ತಿರುತ್ತದೆ ಎಂದು ಹೇಳಿದರು. ಶಿವಮೊಗ್ಗ ಕ್ಷೇತ್ರದಲ್ಲಿ ತಮ್ಮ ಗೆಲುವು ನಿಶ್ಚಿತ ಎಂದ ಈಶ್ವರಪ್ಪ ತನ್ನ ಹಿಂದೂತ್ವ ವಾದವನ್ನು ಕಾಂಗ್ರೆಸ್ ಮುಖಂಡರು ಸಹ ಒಪ್ಪಿ ಬೆಂಬಲ ಸೂಚಿಸುತ್ತಿದ್ದಾರೆ. ಕಾಂಗ್ರೆಸ್ ಒಬ್ಬ ದುರ್ಬಲ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿದೆ ಮತ್ತು ರಾಘವೇಂದ್ರನನ್ನು ನಾವು ಗೆಲ್ಲಲು ಬಿಡಲ್ಲ, ಹಾಗಾಗಿ ನಮ್ಮ ಬೆಂಬಲ ನಿಮಗೆ ಅಂತ ಅವರು ಹೇಳುತ್ತಿದ್ದಾರೆ ಕೆ ಎಸ್ ಈಶ್ವರಪ್ಪ ಆಕ್ರೋಶ ಹೊರ ಹಾಕಿದ್ದಾರೆ.