ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ಒಂದು ದಿನವೂ ರಜೆ ತೆಗೆದುಕೊಳ್ಳದೆ ದೇಶ ಸೇವೆಗಾಗಿಯೇ ಮುಡುಪಾಗಿರುವ ನರೇಂದ್ರಮೋದಿ ಮೂರನೆ ಬಾರಿಗೆ ಪ್ರಧಾನಿಯಾಗಬೇಕು. ಅದಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ. ಅಭ್ಯರ್ಥಿಯನ್ನು ಬಹುಮತಗಳಿಂದ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದು ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ವಕೀಲರುಗಳಲ್ಲಿ ಮನವಿ ಮಾಡಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಮಂಗಳವಾರ ನ್ಯಾಯಾಲಯದಲ್ಲಿ ಮತಯಾಚಿಸಿ ಮಾತನಾಡಿದ ಸುರೇಶ್‍ಕುಮಾರ್ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಗಳಿಗಿಂತ ದೇಶಕ್ಕೆ ಗ್ಯಾರೆಂಟಿಯಾಗಿರುವ ಪ್ರಧಾನಿ ನರೇಂದ್ರಮೋದಿಯನ್ನು ಬೆಂಬಲಿಸಿ. ಉಕ್ರೇನ್-ರಷ್ಯ ನಡುವೆ ಯುದ್ದ ನಡೆದಾಗ ನಮ್ಮ ದೇಶದ 22 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತಂದು ದಿಟ್ಟತನ ತೋರಿದ ಮೋದಿರವರು ನಮ್ಮ ದೇಶಕ್ಕೆ ಸಿಕ್ಕಿರುವುದು ಪುಣ್ಯ. ಕೋವಿಡ್‍ನಲ್ಲಿ ಉಚಿತ ಲಸಿಕೆ ಕೊಡಿಸಿದ್ದರಿಂದ ಭಾರತದಲ್ಲಿ ಸಾವು-ನೋವಿನ ಪ್ರಮಾಣ ಕಡಿಮೆಯಾಗಿದೆ. ನಾನು ಕಾನೂನು ಸಚಿವನಾಗಿದ್ದಾಗ ವಕೀಲರು, ವೈದ್ಯರುಗಳ ಮೇಲೆ ಹಲ್ಲೆಯಾಗಬಾರದು ಅದಕ್ಕಾಗಿ ರಕ್ಷಣೆ ಕೊಡುವ ಕಾಯಿದೆ ಜಾರಿಗೆ ತಂದಿದ್ದೆ. ರಾಜಕಾರಣಿಗಳಾದವರು ಯಾರನ್ನು ಏಕವಚನದಲ್ಲಿ ಮಾತನಾಡಿಸಬಾರದು. ದೇಶ ಯಾವ ದಿಕ್ಕಿನಲ್ಲಿ ಹೋಗಬೇಕೆಂಬ ಚುನಾವಣೆ ಇದಾಗಿರುವುದರಿಂದ ವಕೀಲರುಗಳು ಬಿಜೆಪಿ. ಅಭ್ಯರ್ಥಿಗೆ ಬೆಂಬಲಿಸುವಂತೆ ಸುರೇಶ್‍ಕುಮಾರ್ ವಿನಂತಿಸಿದರು.
ನನ್ನ ಅವಧಿಯಲ್ಲಿ ನ್ಯಾಯಾಲಯಗಳ ಕಟ್ಟಡ, ವಕೀಲರ ಸಂಘಕ್ಕೆ ಕಂಪ್ಯೂಟರ್ ಜೆರಾಕ್ಸ್‍ಗಳನ್ನು ನೀಡಿದ್ದೇನೆಂದು ವಕೀಲರುಗಳಿಗೆ ಸುರೇಶ್‍ಕುಮಾರ್ ನೆನಪಿಸಿದರು.
ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್. ಕಾನೂನು ವಿಭಾಗದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ ಒಬ್ಬ ವ್ಯಕ್ತಿಯಿಂದ ಸರ್ಕಾರಕ್ಕೆ ಒಳ್ಳೆಯ ಕೀರ್ತಿ ಬರಬಹುದು. ಕೆಟ್ಟ ಹೆಸರು ಬರಬಹುದು. ಭಾರತ ಬಲಿಷ್ಟ ದೇಶವಾಗಬೇಕಾದರೆ ಇದೆ ತಿಂಗಳ 26 ರಂದು ನಡೆಯುವ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಬಹುಮತಗಳಿಂದ ಗೆಲ್ಲಿಸಿ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಕೈಜೋಡಿಸಿ ಎಂದು ವಕೀರುಗಳನ್ನು ಕೋರಿದರು.
ಮಾಡನಾಯಕನಹಳ್ಳಿ ಕೆ.ಎನ್.ರಾಜಣ್ಣ ಮಾತನಾಡುತ್ತ ಸರಳ, ಸಜ್ಜನಿಕೆಯ ಗೋವಿಂದ ಕಾರಜೋಳರವರನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಟ್ಟರೆ ಜಿಲ್ಲೆಗೆ ಗೌರವ ತರುತ್ತಾರೆ. ನೀರಾವರಿ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಹೀಗೆ ವಿವಿಧ ಇಲಾಖೆಗಳ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿರುವ ಗೋವಿಂದ ಕಾರಜೋಳರವರು ಅನುಭವಿ ರಾಜಕಾರಣಿ. ಎಲ್ಲರೂ ಅವರಿಗೆ ಮತ ನೀಡಿ ಗೆಲ್ಲಿಸೋಣ ಎಂದು ಹೇಳಿದರು.
ಬಿಜೆಪಿ. ಕಾನೂನು ವಿಭಾಗದ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ನರೇಂದ್ರಮೋದಿ ಮೂರನೆ ಬಾರಿಗೆ ಪ್ರಧಾನಿಯಾಗಬೇಕಾಗಿರುವುದರಿಂದ ಇದು ದೇಶದ ಚುನಾವಣೆಯಾಗಿದೆ. ಅಭ್ಯರ್ಥಿ ಯಾರು ಎನ್ನುವುದಕ್ಕಿಂತ ಪ್ರತಿ ಮತದಾರನು ಮೋದಿ ಮುಖ ನೋಡಿ ಮತ ನೀಡಿದಾಗ ಮಾತ್ರ ದೇಶ ಉಳಿಯಲು ಸಾಧ್ಯ ಎಂದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ ಭಾರತದ ಸಂವಿಧಾನ ಸುಸೂತ್ರವಾಗಿ ನಡೆಯಬೇಕಾದರೆ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು. ಅನುಭವಿ ರಾಜಕಾರಣಿ ಗೋವಿಂದ ಕಾರಜೋಳರವರಿಗೆ ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಸಮಸ್ಯೆಗಳ ಅರಿವಿದೆ. ಹಾಗಾಗಿ ಇಂತಹವರನ್ನು ಗೆಲ್ಲಿಸಿದರೆ ಜಿಲ್ಲೆಯ ಅಭಿವೃದ್ದಿಗೆ ನೆರವಾಗುತ್ತದೆ ಎಂದು ವಕೀಲರುಗಳಲ್ಲಿ ವಿನಂತಿಸಿದರು.
ಚಿತ್ರದುರ್ಗ ವಕೀಲರ ಸಂಘದ ಉಪಾಧ್ಯಕ್ಷ ಅನಿಲ್, ಜೆಡಿಎಸ್. ಯುವ ಘಟಕದ ಅಧ್ಯಕ್ಷ ನ್ಯಾಯವಾದಿ ಪ್ರತಾಪ್‍ಜೋಗಿ, ಜೆಡಿಎಸ್. ಪ್ರಧಾನ ಕಾರ್ಯದರ್ಶಿ ಅಶೋಕ್ ಬೆಳಗಟ್ಟ ಸೇರಿದಂತೆ ನೂರಾರು ವಕೀಲರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.