ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.10): ರಾಜ್ಯಾದ್ಯಂತ ನ.18 ರಿಂದ ಜನಸ್ವರಾಜ್ ಸಮಾವೇಶ ನಡೆಸಲಾಗುವುದೆಂದು ಬಿಜೆಪಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ತಿಳಿಸಿದರು.
ಜನಸ್ವರಾಜ್ ಸಮಾವೇಶದ ಅಂಗವಾಗಿ ಭಾರತೀಯ ಜನತಾಪಾರ್ಟಿಯಿಂದ ಅಮೋಘ ಹೋಟೆಲ್‍ನಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಧಾನಪರಿಷತ್‍ನ 25 ಸ್ಥಾನಗಳಿಗೆ ಡಿ.10 ರಂದು ಚುನಾವಣೆ ನಡೆಯಲಿದ್ದು, ಈ ಬಾರಿ ಹದಿಮೂರರಿಂದ ಹದಿನೈದು ಸ್ಥಾನಗಳನ್ನು ಗೆಲ್ಲಬೇಕಾಗಿರುವುದರಿಂದ ನಾಲ್ಕು ತಂಡಗಳನ್ನು ರಚಿಸಿ ರಾಜ್ಯಾದ್ಯಂತ ಜನಸ್ವರಾಜ್ ಸಮಾವೇಶ ನಡೆಸಲಾಗುವುದು. ಗ್ರಾಮ ಸ್ವರಾಜ್ ಸಮಾವೇಶ ನಡೆಸಿದ ಫಲವಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 45 ಸಾವಿರ ಬಿಜೆಪಿ.ಬೆಂಬಲಿತ ಕಾರ್ಯಕರ್ತರು ಗೆದ್ದಿದ್ದಾರೆ. ಅದೇ ಮಾದರಿಯಲ್ಲಿ ಈಗ ಜನಸ್ವರಾಜ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇವರುಗಳ ನೇತೃತ್ವದ ತಂಡ ರಾಜ್ಯಾದ್ಯಂತ ಸಂಚರಿಸಿ ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳ ಗೆಲುವಿಗೆ ಶ್ರಮಿಸಲಿದೆ ಎಂದು ಹೇಳಿದರು.
ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷ ಆರು ಸ್ಥಾನಗಳನ್ನು ಪಡೆದಿದ್ದು, ಈ ಬಾರಿ ಬಹುಪಾಲು ಪಡೆಯುವುದು ಜನಸ್ವರಾಜ್ ಸಮಾವೇಶದ ಉದ್ದೇಶ ಎಂದು ವಿವರಿಸಿದ ಮಹೇಶ್ ತೆಂಗಿನಕಾಯಿ ಬಿಜೆಪಿ.ಮುಖಂಡರುಗಳು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆಂದು ಡಿ.ಕೆ.ಶಿವಕುಮಾರ್ ಅಪ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‍ನ ಅನೇಕ ಹಿರಿಯರು ಬಿಜೆಪಿ.ಬಾಗಿಲು ತಟ್ಟುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ ಎಂದು ಕಾಂಗ್ರೆಸ್ ಟೀಕೆಗೆ ಪ್ರತ್ಯುತ್ತರ ನೀಡಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಬಿಜೆಪಿ.ರಾಜ್ಯ ಉಪಾಧ್ಯಕ್ಷ ನಂದೀಶ್, ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್, ದಾವಣಗೆರೆ ವಿಭಾಗದ ಸಹ ಪ್ರಭಾರಿ ನಂದೀಶ್, ಮಾಜಿ ಜಿಲ್ಲಾಧ್ಯಕ್ಷ ಟಿ.ಜಿ.ನರೇಂದ್ರನಾಥ್, ಪ್ರಧಾನ ಕಾರ್ಯದರ್ಶಿ ಜೈಪಾಲ್, ಸುರೇಶ್ ಸಿದ್ದಾಪುರ ಪತ್ರಿಕಾಗೋಷ್ಟಿಯಲ್ಲಿದ್ದರು.