ಅಬ್ಬಬ್ಬ.. ದಿನೇ ದಿನೇ ಬೇಸಿಗೆಯ ಬಿಸಿ ಅದೆಷ್ಟು ಹೆಚ್ಚಾಗುತ್ತಿದೆ ಎಂದರೆ ತಂಪು ತಂಪು ಕೂಲ್ ಕೂಲ್ ಆಗುವುದಕ್ಕೆ ನಾನಾ ಪಾನೀಯಗಳ ಮೊರೆ ಹೋಗುತ್ತಿದ್ದಾರೆ ಜನ. ಆದರೂ ಏರುತ್ತಿರುವ ಉಷ್ಣಾಂಶವನ್ನು ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಬೇಗ ಮಳೆ ಬರಲ್ಲಪ್ಪ ಎಂದೇ ಜನ ಆಕಾಶ ನೋಡಿ ಬೇಡಿಕೊಂಡಿದ್ದಾರೆ.
ಯುಗಾದಿಯ ಬಳಿಕ ಹಲವೆಡೆ ಮಳೆಯಾಗಿದೆ. ಶಿವಮೊಗ್ಗ, ಧಾರವಾಡ, ಹುಬ್ಬಳ್ಳಿ ಕಡೆಗಳಲ್ಲೆಲ್ಲಾ ಅದ್ಭುತವಾಗಿಯೇ ವರುಣರಾಯ ತಂಪೆರೆದಿದ್ದಾನೆ. ಭೂಮಿ ತಂಪಾಯಿತಲ್ಲ ಎಂದು ಜನ ಖುಷಿ ಪಡುವಾಗಲೇ ಕಷ್ಟಪಟ್ಟು ಉಳಿಸಿಕೊಂಡಿದ್ದ ಬೆಳೆಯೂ ಹೋಯ್ತಲ್ಲ ಅಂತ ರೈತಾಪಿ ವರ್ಗ ಕಣ್ಣೀರು ಹಾಕುತ್ತಿದ್ದಾರೆ.
ಮೊದಲೇ ಈ ಬಾರಿ ಹಿಂಗಾರು ಹಾಗೂ ಮುಂಗಾರು ಎರಡು ಮಳೆಯೂ ಕೈಕೊಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದೆ. ಬರದ ನಡುವೆ ಪರಿಹಾರಕ್ಕಾಗಿ ರೈತರು ಒದ್ದಾಡುತ್ತಿದ್ದಾರೆ. ಇದರ ನಡುವೆಯೂ ಹಾಗೋ ಹೀಗೋ ಕಷ್ಟಪಟ್ಟು ಕಾಪಾಡಿಕೊಂಡು ಬಂದಿದ್ದಂತ ಬಾಳೆ, ಅಡಿಕೆ ಬೆಳೆ ಇತ್ತಿಚೆಗಷ್ಟೇ ಬಂದ ಮಳೆಯಿಂದ ನೆಲ ಕಚ್ಚಿದೆ. ಕೆಲವೆಡೆ ವಿದ್ಯುತ್ ಕಂಬಗಳು ನೆಲಕಚ್ಚಿವೆ.
ಧಾರಾವಾಡ ಜಿಲ್ಲೆಯ ಕಲಘಟಗಿ ತಾಲೂಕು ಸೇರಿದಂತೆ ಹಲವು ಗ್ರಾಮಗಳಲ್ಲಿ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಮಾವು ಹಾಗೂ ಬಾಳೆ ಬೆಳೆಗೆ ಹಾನಿಯಾಗಿದೆ. ಇದರಿಂದ ರೈತಾಪಿ ವರ್ಗ ಮಳೆ ಬಂತು ಅಂತ ಖುಷಿ ಪಡಯವುದೋ ಅಥವಾ ಬಂದ ಮಳೆಯಿಂದ ಕಷ್ಟಪಟ್ಟು ಉಳಿಸಿಕೊಂಡಿದ್ದ ಬೆಳೆ ಮಣ್ಣು ಪಾಲಾಯಿತಲ್ಲ ಎಂದು ನೋವು ಪಡಬೇಕೋ ತಿಳಿಯದೆ ಕುಳಿತಿದ್ದಾನೆ. ಇನ್ನು ಕೆಲವು ಜಿಲ್ಲೆಯಲ್ಲಿ ಮಳೆಯೇ ಬಾರದೆ ಜನ ಬಿಸಿಲ ಧಗೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.