ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 12 : ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾಮ್ರೇಡ್ ಡಿ. ಸುಜಾತ ಅವರು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಇಂದು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜೋಗಿಮಟ್ಟಿ ವೃತ್ತದ ವರೆಗೆ ಪಾದಯಾತ್ರೆಯ ಮೂಲಕ ಸಂಚರಿಸಿ ನಗರದ ಜನತೆಯಲ್ಲಿ ಮತಯಾಚಿಸಿದರು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಮ್ಮ ಪಾದಯಾತ್ರೆಯನ್ನು ಪ್ರಾರಂಭಿಸುವ ಮೊದಲು ಮಾತನಾಡಿದ ಅವರು “ಇದುವರೆಗೂ ನಮ್ಮನ್ನಾಳಿರುವ ಎಲ್ಲಾ ಸರ್ಕಾರಗಳು, ಚಿತ್ರದುರ್ಗ ಜಿಲ್ಲೆಯನ್ನು ಒಂದು ಹಿಂದುಳಿದ ಜಿಲ್ಲೆಯನ್ನಾಗಿ ಉಳಿಸಿದ್ದಾರೆ. ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆಗಳಾದ ಭದ್ರಾ ಮೇಲ್ದಂಡೆ ಯೋಜನೆ, ದಾವಣಗೆರೆ-ತುಮಕೂರು ನೇರ ರೈಲ್ವೆ ಯೋಜನೆಯಂತಹ ಮಹತ್ವಾಕಾಂಕ್ಷೆಯ ಯೋಜನೆಗಳು ನೆನಗುದಿಗೆ ಬಿದ್ದಿವೆ. ಬೆಲೆಏರಿಕೆ, ಬಡತನ, ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯಗಳ ವ್ಯಾಪಾರಿಕರಣದಿಂದ ಜನತೆ ತತ್ತರಿಸಿದ್ದಾರೆ.
ಈ ಎಲ್ಲ ಮೂಲಭೂತ ಸಮಸ್ಯೆಗಳ ವಿರುದ್ಧ ಸದನದಲ್ಲಿ ಹೋರಾಟದ ಧ್ವನಿ ಎತ್ತಲು ನಮ್ಮ ಪಕ್ಷ ಎಸ್‍ಯುಸಿಐ (ಕಮ್ಯುನಿಸ್ಟ್) ಈ ಬಾರಿ ದೇಶದಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಪರ್ಧಿಸುತ್ತಿರುವ ಹೋರಾಟ ನಿರತ ಪಕ್ಷವಾದ ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಿ, ಜಯಶೀಲಳನ್ನಾಗಿ ಮಾಡಬೇಕೆಂದು” ಕೋರಿದರು. ದಾರಿ ಉದ್ದಕ್ಕೂ ಜನರನ್ನು ಭೇಟಿಯಾಗುತ್ತ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಮುಖಂಡರಾದ ಡಾ. ಜಿಎಸ್ ಕುಮಾರ್, ಸ್ಥಳೀಯ ಸಮಿತಿ ಸದಸ್ಯರಾದ ರವಿಕುಮಾರ್, ಕುಮುದಾ, ಕಾರ್ಯಕರ್ತರಾದ ಈರಣ್ಣ, ಮಂಜುನಾಥ್, ಅಭಿಲಾಷ, ಶಾಂತಿ, ನಾಗರಾಜ್ ಚಿಂತಾಮಣಿ, ನಾಗರಾಜು, ಪ್ರಕೃತಿ ಮತ್ತಿತರರು ಪಾಲ್ಗೊಂಡಿದ್ದರು.