ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಪಾಲಿಟಿಕ್ಸ್ ಜೋರಾಗಿದೆ. ಅದರಲ್ಲೂ ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಗಳ ಹೆಸರೇ ಹೆಚ್ಚು ಚಾಲ್ತಿಯಲ್ಲಿದೆ. ಹೀಗಾಗಿ ಸ್ವಾಮೀಜಿಗಳು ಈ ವಿಚಾರದಲ್ಲಿ ಮೌನ ಮುರಿದಿದ್ದಾರೆ. ನಿಮ್ಮ ರಾಜಕೀಯಕ್ಕೆ ಮಠ ಹಾಗೂ ನನ್ನ ಹೆಸರನ್ನು ಬಳಸಿಕೊಳ್ಳಬೇಡಿ ಎಂದಿದ್ದಾರೆ.
ನಿಮ್ಮ ವೈಯಕ್ತಿಕ ಆರೋಪಗಳ ನಡುವೆ ಮಠವನ್ನು ಹಾಗೂ ತಮ್ಮ ಹೆಸರನ್ನು ಎಳೆದು ತರಬೇಡಿ. ನಿಮ್ಮ ಮಾತುಗಳಿಗೆ ಮಠದ ಹೆಸರನ್ನು ಏಕೆ ಬಳಕೆ ಮಾಡಿಕೊಳ್ಳುತ್ತೀರಿ. ಮಠಕ್ಕೆ ಅದರದ್ದೇ ಆದ ಘಟನೆ, ಗೌರವ ಇದೆ. ಹೀಗಾಗಿ ಇನ್ನು ಮುಂದೆ ಮಾತನಾಡುವಾಗ ಎಚ್ಚರ ವಹಿಸಿ ಎಂದು ಡಿಕೆ ಶಿವಕುಮಾರ್, ಹೆಚ್ ಡಿ ಕುಮಾರಸ್ವಾಮಿ ಹಾಗೂ ಎನ್ ಚಲುವರಾಯಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ನಿರ್ಮಲಾನಂದ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿಸಿದ್ದರು ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದರು. ಈಗ ಅವರ ಬಳಿಗೆ ಹೋಗಿ ಹೇಗೆ ಆಶೀರ್ವಾದ ಕೇಳುತ್ತಿದ್ದಾರೆ. ಸ್ವಾಮೀಜಿಗಳು ಯಾರ ಪರ ಅಥವಾ ಯಾವ ಪಕ್ಷದ ಪರವೂ ಪ್ರಚಾರ ಮಾಡಲು ಆಗುವುದಿಲ್ಲ. ಚುಂಚನಗಿರಿ ಮಠವು ಒಕ್ಕಲಿಗ ಸಮುದಾಯದ ಮಠವಾಗಿದ್ದರು, ಎಲ್ಲಾ ಜಾತಿಯವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿರುವ ಮಠವೆಂದು ಹೇಳಿದ್ದರು.
ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದರು. ನಾನು ಫೋನ್ ಟ್ಯಾಪಿಂಗ್ ಮಾಡಿಸಿದ್ದರೆ ನನ್ನ ಸರ್ಕಾರವನ್ನೇ ನಾನೇಕೆ ಬೀಳಿಸಿಕೊಳ್ಳುತ್ತಿದ್ದೆ. ಬೇರೆ ಸಮುದಾಯಗಳಲ್ಲಿ ಎಷ್ಟು ಮಠಗಳಿಲ್ಲ. ನಮ್ಮ ಸಮುದಾಯದಲ್ಲೂ ಅಂಥ ಬೆಳವಣಿಗೆಯಾಗಲಿ ಎಂದು ಇನ್ನೊಬ್ಬರಿಗೂ ಸಹಾಯ ಮಾಡಿದ್ದೇವೆ. ಅದರಲ್ಲಿ ಏನಿದೆ ಎಂದಿದ್ದಾರೆ. ಈ ಎಲ್ಲಾ ಬೆಳವಣಿಗೆಯನ್ನು ಕಂಡ ನಿರ್ಮಲಾನಂದ ಸ್ವಾಮಿಗಳು ಗರಂ ಆಗಿದ್ದು, ಖಡಕ್ ಸೂಚನೆ ನೀಡಿದ್ದಾರೆ.