ಶಿವಮೊಗ್ಗ: ಕೆ ಎಸ್ ಈಶ್ವರಪ್ಪ ಬಿಜೆಪಿ ವಿರುದ್ಧ ಸ್ಟ್ರಾಂಗ್ ಆಗಿಯೇ ಆಗಿಯೇ ಬಂಡಾಯ ಸಾರಿದ್ದಾರೆ. ಯಾರು ಎಷ್ಟೇ ಹೇಳಿದರು ಅದಕ್ಕೆಲ್ಲ ಜಗ್ಗದೆ, ಬಗ್ಗದೆ ತಮ್ಮ ಪಾಡಿಗೆ ತಾವೂ ಪ್ರಚಾರದಲ್ಲಿ ಮುಳುಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸೋದೆ ಎಂದಿದ್ದಾರೆ. ಇದರ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪುತ್ರರ ವಿರುದ್ಧ ಹೌಹಾರುತ್ತಲೇ ಇದ್ದಾರೆ.
ಇತ್ತಿಚೆಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ಈಶ್ವರಪ್ಪ ಅವರು ಪಕ್ಷದ ಹಿರಿಯರು. ಈಗಲೂ ಕಾಲ ಮಿಂಚಿಲ್ಲ. ಬಂಡಾಯವನ್ನು ಬಿಡಲಿ ಎಂದು ಮನವಿ ಮಾಡಿದ್ದರು. ಆದರೆ ಈ ಬಾರಿ ಆ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ್ದು, ವಾಪಾಸ್ ಬರುವುದಕ್ಕೆ ಎರಡು ಷರತ್ತುಗಳನ್ನು ವಿಧಿಸಿದ್ದಾರೆ. ಬಂಡಾಯ ಶಮನವಾಗಬೇಕಾದರೆ ರಾಘವೇಂದ್ರ ಸ್ಪರ್ಧಿಸಬಾರದು, ವಿಜಯೇಂದ್ರ ರಾಜೀನಾಮೆ ನೀಡಬೇಕು. ಆಗ ನಾನು ವಾಪಾಸ್ ಬರುತ್ತೇನೆ ಎಂದಿದ್ದಾರೆ.
” ನಿನ್ನ ಅಣ್ಣ ರಾಘವೇಂದ್ರನನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಹಿಂದಕ್ಕೆ ಸರಿಸು. ನೀನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡು. ಅದಾದ ಕೂಡಲೇ ನಾನು ವಾಪಾಸ್ ಬರುತ್ತೇನೆ. ಸಾಧ್ಯನಾ..? ನಾನು ಈಗಲೂ ಬಿಜೆಪಿಯ ಸದಸ್ಯ. ನಿಮ್ಮ ಅಣ್ಣ ಸೋಲುತ್ತಾನೆ ಎಂಬ ಭಯವಾ..? ಮೂರು ಲಕ್ಷದ ಅಂತರದಿಂದ ಗೆಲುವು ಸಾಧಿಸುತ್ತೇನೆ. ನೀವೆ ರಾಜಕೀಯದ ಗೂಟ ಇಟ್ಟುಕೊಂಡು ಇರಬೇಕಾ. ವಿಜಯೇಂದ್ರ ಅಪ್ಪ ಕೇಂದ್ರ ಚುನಾವಣಾ ಸಮಿತಿಯ ಸದಸ್ಯ. ಇನ್ನೊಬ್ಬ ಶಿವಮೊಗ್ಗದ ಸಂಸದ, ಇವರು ಶಿಕಾರಿಪುರದ ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ. ಲಿಂಗಾಯತರು ಅಧ್ಯಕ್ಷರಾಗಬೇಕೆಂದು ಇದ್ದರೆ, ಯತ್ನಾಳ್ ಅವರಿಗೆ. ಒಕ್ಕಲಿಗರು ಬೇಕೆಂದರೆ ಸಿಟಿ ರವಿ ಅವರಿಗೆ ಇಲ್ಲದೆ ಇದ್ದರೆ ನನಗೆ ರಾಜ್ಯಾಧ್ಯಕ್ಷ ಹುದ್ದೆ ಬಿಟ್ಟು ಕೊಡಲಿ ಎಂದಿದ್ದಾರೆ.