ಬೆಂಗಳೂರು: ಒಂದು ಕಡೆ ಮಳೆಯಿಲ್ಲ.. ಬೆಳೆಯಿಲ್ಲ. ಈಗ ಬೇಸಿಗೆ ರಜೆ ಬೇರೆ ಮಕ್ಕಳಿಗೆ. ಈಗಾಗಲೇ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಶಾಲಾ ರಜೆ ಇರುವ ಕಾರಣ, ಎಷ್ಟೊ ಮಕ್ಕಳಿಗೆ ಊಟದ ಸಮಸ್ಯೆಯೂ ಆಗಬಹುದು. ಹೀಗಾಗಿ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಮಕ್ಕಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 11 ರಿಂದ ಮೇ 28ರವರೆಗೆ ಸುಮಾರು 41ದಿನಗಳ ಕಾಲ ಊಟದ ವ್ಯವಸ್ಥೆ ಮಾಡಲು ಇಲಾಖೆ ತಿಳಿಸಿದೆ.
ಏಪ್ರಿಲ್ 11ರಿಂದ ಬೇಸಿಗೆ ರಜೆ ಆರಂಭವಾಗಲಿದೆ. ಅಂದಿನಿಂದ ಬೇಸಿಗೆ ರಜೆ ಮುಗಿಯುವ ತನಕ ಬರಪೀಡಿತ ಪ್ರದೇಶಗಳಲ್ಲಿ ಮಕ್ಕಳಿಗೆ ಊಟ ವ್ಯವಸ್ಥೆ ಮಾಡಲಾಗಿದೆ. 1 ರಿಂದ 10ನೇ ತರಗತಿ ಮಕ್ಕಳಿಗೆ ಈ ವ್ಯವಸ್ಥೆ ಮಾಡಲು ಆದೇಶದಲ್ಲಿ ತಿಳಿಸಿದೆ.
ಮಧ್ಯಾಹ್ನದ ಊಟದ ವ್ಯವಸ್ಥೆಯಿಂದ ಸಾಕಷ್ಟು ಮಕ್ಕಳಿಗೆ ಅನುಕೂಲವಾಗಲಿದೆ. ಸುಮಾರು 55 ಲಕ್ಷ ವಿದ್ಯಾರ್ಥಿಗಳು ಇದರಿಂದ ಲಾಭ ಪಡೆಯಲಿದ್ದಾರೆ. ಈ ಬೇಸಿಗೆ ಊಟದ ವ್ಯವಸ್ಥೆಗಾಗಿ ಒಟ್ಟು 88.4 ಕೋಟಿ ಹಣ ಖರ್ಚು ಮಾಡಲಿದೆ. ರಾಜ್ಯದಲ್ಲಿ 38 ಸೆಲ್ಸಿಯಸ್ ಗರಿಷ್ಠ ತಾಪಮಾನವಿದೆ. ಬಿಸಿಲಿನ ಬೇಗೆಗೆ ಜನ ಹೈರಾಣಾಗಿ ಹೋಗಿದ್ದಾರೆ. ಈ ಬಿಸಿಲಿನಲ್ಲಿ ಮಕ್ಕಳ ಹಸಿವು ನೀಗಿಸಲು ಸರ್ಕಾರ ಈ ಪ್ಲ್ಯಾನ್ ಮಾಡಿದೆ.