ಮೈಸೂರು: ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 4 ಕಡೆಯ ದಿನವಾಗಿದೆ. ಹೀಗಾಗಿ ಅಭ್ಯರ್ಥಿಗಳು ತಮ್ಮ ತಮ್ಮ ಸಮಯ, ದಿನ ನೋಡಿಕೊಂಡು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಇಂದು ಮೈಸೂರು-ಕೊಡಗು ಅಭ್ಯರ್ಥಿ ಯದುವೀರ್ ಒಡೆಯರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರದ ಜೊತೆಗೆ ಅಫಿಡವಿಟ್ ಕೂಡ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ತಮ್ಮ ಹೆಸರಲ್ಲಿರುವ ಆಸ್ತಿಯನ್ನು ತಿಳಿಸಿದ್ದಾರೆ.
ರಾಜವಂಶಸ್ಥರು ಎಂದರೆ ಸಾವಿರಾರು ಕೋಟಿ ಒಡೆಯರು ಎಂದೇ ಭಾವಿಸುತ್ತೇವೆ. ಆದರೆ ಇದೀಗ ಯದುವೀರ್ ಅವರು ಸಲ್ಲಿಸಿರುವ ಅಫಿಡೆವಿಟ್ ನಲ್ಲಿ ಆಸ್ತಿ ಘೋಷಣೆ ಮಾಡಿದ್ದಾರೆ. ಅದರಲ್ಲಿ ಐದು ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಅದರಲ್ಲಿ ಕೈಯಲ್ಲಿ ಒಂದು ಲಕ್ಷ ರೂಪಾಯಿ ನಗದು, ವಿವಿಧ ಬ್ಯಾಂಕ್ ಅಕೌಂಟ್ ಗಳಲ್ಲಿ 1.36 ಕೋಟಿ ರೂಪಾಯಿ ಇದೆ. ಜೊತೆಗೆ 3.25 ಕೋಟಿ ಮೌಲ್ಯದ 4 ಕೆಜಿ ಚಿನ್ನ, 14 ಲಕ್ಷ ರೂಪಾಯಿ ಮೌಲ್ಯದ 20 ಕೆಜಿ ಬೆಳ್ಳಿ ಕೂಡ ಇದೆ. ಕೃಷಿ ಭೂಮಿ ಆಗಲಿ, ಸೈಟ್ ಆಗಲಿ, ಮನೆ ಆಗಲಿ ಒಡೆಯರ್ ಹೆಸರಲ್ಲಿ ಇಲ್ಲ. ಒಟ್ಟು 4.99 ಕೋಟಿ ಚರಾಸ್ತಿಯನ್ನು ಹೊಂದಿದ್ದಾರೆ.
ಒಡೆಯರ್ ಪತ್ನಿಯ ಬಳಿ ಇರುವ ಆಸ್ತಿಯನ್ನು ಇಲ್ಲಿ ಹೇಳಲಾಗಿದೆ. ಅದರಲ್ಲಿ 75 ಸಾವಿರ ರೂಪಾಯಿ ನಗದು, 90 ಲಕ್ಷ ಮೌಲ್ಯದ 2 ಕೆಜಿ ಚಿನ್ನ, 5.5 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ಚಿನ್ನದ ಗಟ್ಟಿ, 7 ಲಕ್ಷ ರೂ ಮೌಲ್ಯದ 10 ಕೆಜಿ ಬೆಳ್ಳಿ ಇದೆ. ಒಟ್ಟು 1.04 ಕೋಟಿ ರೂಪಾಯಿ ಮೌಲ್ಯದ ಚರಾಸ್ಥಿ ಇದೆ. ಯದುವೀರ್ ಪುತ್ರನ ಹೆಸರಲ್ಲಿ ಸುಮಾರು 3.63 ಕೋಟಿ ಚರಾಸ್ಥಿ ಇದೆ.