ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರ ಕಾಂಗ್ರೆಸ್ ಗೆ ಕಗ್ಗಂಟಾಗಿ ಉಳಿದಿತ್ತು. ಇದೀಗ ಕಡೆಗೂ ಕೋಲಾರ ಕ್ಷೇತ್ರದ ಟಿಕೆಟ್ ಅನೌನ್ಸ್ ಆಗಿದೆ. ಕೆ ಹೆಚ್ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ನಡುವೆ ಜಟಾಪಟಿ ಎದ್ದಿತ್ತು. ಇದೋಗ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಕೆ ವಿ ಗೌತಮ್ ಗೆ ಟಿಕೆಟ್ ನೀಡಿದ್ದಾರೆ.
ಕೋಲಾರ ಟಿಕೆಟ್ ಪಡೆದ ಗೌತಮ್, ಮೂಲತಃ ಬೆಂಗಳೂರಿನವರು. ಗೌತಮ್ ತಂದೆ ವಿಜಯ್ ಕುಮಾರ್ ಅವರು ಬೆಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಮೇಯರ್ ಆಗಿದ್ದವರು. ಗೌತಮ್ ಅವರು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ಕೆ.ವಿ ಗೌತಮ್ ಅವರು NSUI ಬೆಂಗಳೂರು ನಗರ ಕಾರ್ಯದರ್ಶಿ ಆಗಿದ್ದರು. ನಂತರ ಯೂತ್ ಕಾಂಗ್ರೆಸ್ ಬೆಂಗಳೂರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಚಿವ ಕೃಷ್ಣ ಭೈರೇಗೌಡರು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವೇಳೆ ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಯಾಗಿ ಗೌತಮ್ ಕಾರ್ಯ ನಿರ್ವಹಿಸಿದ್ದಾರೆ.
ಟಿಕೆಟ್ ನೀಡಿದ ಸಂಬಂಧ ಎಐಸಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ‘ಲೋಕಸಭಾ ಚುನಾವಣೆಗಳು – 2024 – ಕರ್ನಾಟಕ, ಕೇಂದ್ರ ಚುನಾವಣಾ ಸಮಿತಿಯು ಶ್ರೀ ಕೆ.ವಿ. ಕರ್ನಾಟಕದ 28 ಕೋಲಾರ ಎಸ್‌ಸಿ ಸಂಸದೀಯ ಕ್ಷೇತ್ರದಿಂದ ಲೋಕಸಭೆಗೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಗೌತಮ್ ಕಾಂಗ್ರೆಸ್ ಅಭ್ಯರ್ಥಿಯಾಗಿ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಮೂಲಕ ಕಗ್ಗಂಟಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕಡೆಗೂ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ.