ಸುದ್ದಿಒನ್, ಚಿತ್ರದುರ್ಗ : ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ಕೆಲವೇ ಕೆಲವು ಕ್ಷೇತ್ರಗಳಿಗೆ ಹೊರತುಪಡಿಸಿ ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿವೆ.
ಅದರಂತೆಯೇ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ
ಕಾಂಗ್ರೆಸ್ ಪಕ್ಷದಿಂದ ಬರೋಬ್ಬರಿ 25 ಕ್ಕೂ ಹೆಚ್ಚು ಮಂದಿ ಟಿಕೆಟ್ ಆಕಾಂಕ್ಷಿಗಳು ಪೈಪೋಟಿ ನಡೆಸಿದ್ದರು.
ಇವರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಡಾ.ಬಿ.ತಿಪ್ಪೇಸ್ವಾಮಿ (ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ), ವಿನಯ್ ತಿಮ್ಮಪೂರ್, ನೇರ‌್ಲಗುಂಟೆ ರಾಮಪ್ಪ ಅವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಅಂತಿಮವಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಚ್ಚು ಲಾಭಿ ನಡೆಸಿದವರು ಬಿ.ಎನ್.ಚಂದ್ರಪ್ಪ ಮತ್ತು ಡಾ.ಬಿ.ತಿಪ್ಪೇಸ್ವಾಮಿ. ಇಬ್ಬರ ಮಧ್ಯೆ ನೇರಹಣಾಹಣಿ ಏರ್ಪಟ್ಟಿತ್ತು. ಹಾವು – ಏಣಿ ಆಟದಂತೆ ಇದ್ದ ಇಬ್ಬರ ಮಧ್ಯೆಯ ಪೈಪೋಟಿ ಚಿತ್ರದುರ್ಗ ಕ್ಷೇತ್ರದಲ್ಲಿ ಬಾರೀ ಕುತೂಹಲ ಮೂಡಿಸಿತ್ತು ಮತ್ತು ಜಿಲ್ಲೆಯ ರಾಜಕೀಯ ವಲಯದಲ್ಲಿ ಅತ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಚಂದ್ರಪ್ಪ ಹಾಗೂ ತಿಪ್ಪೇಸ್ವಾಮಿ ಬೆಂಬಲಿಗರಲ್ಲಿ ನಮ್ಮ ನಾಯಕರಿಗೆ ಟಿಕೆಟ್ ಖಚಿತ ಎಂಬ ವಿಶ್ವಾಸ ಇತ್ತು.
ಅದರಲ್ಲೂ ಡಾ.ಬಿ.ತಿಪ್ಪೇಸ್ವಾಮಿ ಅಣ್ಣ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ನೌಕರ ಬಿ.ರಾಜಪ್ಪ ತನ್ನ ತಮ್ಮನಿಗೆ ಈ ಬಾರಿ ಟಿಕೆಟ್ ಖಚಿತ ಎಂದೇ ಅತ್ಯಂತ ಆತ್ಮವಿಶ್ವಾಸ ಹೊಂದಿದ್ದರು.
ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿರುವ ಕಾರ್ಯ ವರಿಷ್ಠರು ಗುರುತಿಸಿದ್ದಾರೆ. ಜತೆಗೆ ನನ್ನ ತಮ್ಮ ತಿಪ್ಪೇಸ್ವಾಮಿ ದೆಹಲಿಯಲ್ಲಿ ತಿಂಗಳುಗಟ್ಟಲೇ ಬೀಡು ಬಿಟ್ಟಿದ್ದು, ಈ ಬಾರಿ ಟಿಕೆಟ್ ತಂದೇ ತರುತ್ತಾರೆ ಎಂಬ ಆತ್ಮವಿಶ್ವಾಸ ಹೊಂದಿದ್ದರು. ಜೊತೆಗೆ ಮಾರ್ಚ್ 8 ರಂದು ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಘೋಷಿಸಿದ ಮೊದಲ ಪಟ್ಟಿಯಲ್ಲಿ ಚಂದ್ರಪ್ಪ ಅವರ ಹೆಸರು ಘೋಷಣೆ ಆಗಿ ಅದಕ್ಕೆ ತಡೆ ದೊರೆಯುತ್ತಿದ್ದಂತೆ ಬಿ.ರಾಜಪ್ಪ ಅವರಲ್ಲಿ ತಮ್ಮ ಡಾ. ತಿಪ್ಪೇಸ್ವಾಮಿ ಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ಇಮ್ಮಡಿಯಾಗಿತ್ತು.
ಆದರೆ ಕೊನೇ ಗಳಿಗೆಯಲ್ಲಿ ಪಕ್ಷದ ವರಿಷ್ಠರು ಎಲ್ಲ ರೀತಿಯಲ್ಲಿ ಅಳೆದು ತೂಗಿ ಚಿಂತನೆ ನಡೆಸಿ ಡಾ.ಬಿ.ತಿಪ್ಪೇಸ್ವಾಮಿ ಅವರ ಬದಲಾಗಿ ಬಿ.ಎನ್.ಚಂದ್ರಪ್ಪ ಅವರನ್ನು ಕಣಕ್ಕೆ ಇಳಿಸಲು ನಿರ್ಧಾರ ಕೈಗೊಂಡರು. ಜೊತೆಗೆ ಎರಡನೇ ಪಟ್ಟಿಯಲ್ಲಿ ಹೆಸರನ್ನು ಘೋಷಣೆ ಮಾಡಿಯೇ ಬಿಟ್ಟರು.
ಇದರಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದ ಬಿ.ರಾಜಪ್ಪ ತಮ್ಮ ಆಪ್ತರ ಬಳಿ ತಮ್ಮನಿಗೆ ಆಗಿರುವ ಅನ್ಯಾಯ ಕುರಿತು ಹೆಚ್ಚು ಮನನೊಂದು ಕೊಂಡು ಮಾತನಾಡುತ್ತಿದ್ದರು. ಜೊತೆಗೆ ಆರು ಮಂದಿ ಶಾಸಕರು, ಬ್ಲಾಕ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಸೇರಿದಂತೆ ಎಲ್ಲರೂ ಡಾ.ಬಿ.ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ಕೊಡುವಂತೆ ತಿಳಿಸಿದ್ದರೂ ಟಿಕೆಟ್ ಕೊಡದೆ ಅನ್ಯಾಯ ಮಾಡಿಬಿಟ್ಟರು ಎಂದು ಬಾರೀ ನಿರಾಸೆಗೊಂಡಿದ್ದರು.
ಪಕ್ಷಕ್ಕಾಗಿ ತನ್ನ ಬದುಕನ್ನೇ ಅರ್ಪಿಸಿಕೊಂಡಿದ್ದ ಡಾ.ಬಿ.ತಿಪ್ಪೇಸ್ವಾಮಿಗೆ ಟಿಕೆಟ್ ಕೊಡಲಾಗುವುದು ಎಂದು ಹೇಳಿ ಒಂದು ವರ್ಷ ಮುಂಚೆಯೇ ಕ್ಷೇತ್ರ ಸುತ್ತಾಡುವಂತೆ ಹೇಳಿದ್ದರು. ಇದನ್ನು ನಂಬಿ ನನ್ನ ತಮ್ಮ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿಕೊಂಡಿದ್ದರು. ಈಗ ನೋಡಿದರೆ ನಡುನೀರಲ್ಲಿ ಕೈಬಿಡಲಾಗಿದೆ ಎಂದು ಬಹಳಷ್ಟು ನೊಂದುಕೊಂಡು ಮಾತನಾಡುತ್ತಿದ್ದರು.
ಇದನ್ನೇ ಮನಸಿನಲ್ಲಿಟ್ಟುಕೊಂಡು ತೀವ್ರ ಆತಂಕಕ್ಕೆ ಒಳಗಾಗಿದ್ದ ಬಿ.ರಾಜಪ್ಪ ಅವರಿಗೆ ಹೃದಯಘಾತವಾಗಿದ್ದು, ತಕ್ಷಣ ಕುಟುಂಬದ ಸದಸ್ಯರು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಪ್ರಾಣಾಪಯದಿಂದ ಪಾರಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಆಧುನಿಕತೆಯ ಸೋಗಿನಲ್ಲಿ ಬದುಕುತ್ತಿರುವ ನಾವೆಲ್ಲರೂ ಬಂಧ ಸಂಬಂಧಗಳನ್ನು ದೂರ ಮಾಡಿಕೊಂಡು ತಾಯಿ ಮಕ್ಕಳು, ಅಣ್ಣ- ತಮ್ಮಂದಿರು ಸೇರಿದಂತೆ ಕರುಳ ಸಂಬಂಧಗಳೇ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ತನ್ನ ತಮ್ಮನಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ್ದರಿಂದ ತೀವ್ರ ನಿರಾಶರಾಗಿ ಹೃದಯಾಘಾತಕ್ಕೆ ಒಳಗಾಗುವಷ್ಟು ಆತಂಕಕ್ಕೆ ಒಳಗಾಗಿರುವ ಬಿ.ರಾಜಪ್ಪ ಕುರಿತು ಇಡೀ ರಾಜಕೀಯ ವಲದಯಲ್ಲಿಯೇ ತೀವ್ರ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಅಣ್ಣ ಅಂದ್ರೇ ಹೀಗಿರಬೇಕು. ಒಡಹುಟ್ಟಿದವರ ಮಧ್ಯೆ ಇಂತಹುದೊಂದು ಬಾಂಧವ್ಯ ಇರುವುದು ಇತ್ತೀಚಿನ ದಿನಗಳಲ್ಲಿ ತೀರಾ ಅಪರೂಪ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ತನ್ನ ತಮ್ಮನಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದಿದ್ದರೆ ಬಿ. ರಾಜಪ್ಪನವರ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.
ವಿವಿಧ ಪಕ್ಷದ ಎಲ್ಲ ಮುಖಂಡರು, ನಾಯಕರು, ಕಾರ್ಯಕರ್ತರು ಬಿ.ರಾಜಪ್ಪ ತನ್ನ ತಮ್ಮನ ರಾಜಕೀಯ ಬೆಳವಣಿಗೆ ಕುರಿತು ಇಟ್ಟುಕೊಂಡಿದ್ದ ಆಸೆ ನಿಜಕ್ಕೂ ಗ್ರೇಟ್. ಶೀಘ್ರ ಗುಣಮುಖರಾಗಿ ಬಿ.ರಾಜಪ್ಪ ಬೇಗ ದುರ್ಗಕ್ಕೆ ಮರಳಲಿ. ಜೊತೆಗೆ ರಾಜಕೀಯದಲ್ಲಿ ಏಳು-ಬೀಳುಗಳು ಸಾಮಾನ್ಯ. ಒಂದಿಲ್ಲ ಒಂದು ದಿನ ಡಾ.ಬಿ.ತಿಪ್ಪೇಸ್ವಾಮಿಗೆ ಅವಕಾಶ ಒದಗಿ ಬರಲಿದೆ. ಈ ಆಶಾಭಾವನೆ ರಾಜಪ್ಪ ಅವರಲ್ಲಿ ಹೆಚ್ಚಾಗಿ ಶೀಘ್ರ ಗುಣಮುಖರಾಗಲಿ ಎಂದು ಹಿತೈಷಿಗಳು ಹಾರೈಸುತ್ತಿದ್ದಾರೆ.