ಚಿತ್ರದುರ್ಗ. ಮಾರ್ಚ್26: ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಸಂದೇಶ ಸಾರಿ, ಬರದ ನಾಡಿನಲ್ಲಿ ಜಲ ಸಂರಕ್ಷಣೆಯ ಮಹತ್ವ ತಿಳಿಸಿದ ನಾಯಕನಹಟ್ಟಿಯ ಕಾಯಕಯೋಗಿ ಶ್ರೀ.ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಸುಡು ಬಿಸಿಲ ನಡುವೆಯೂ, ಕುಂಡದಲ್ಲಿ ಒಣ ಕೊಬ್ಬರಿ ಜ್ವಲಿಸಿ, ಲಕ್ಷಾಂತರ ಭಕ್ತರು ಭಕ್ತಿ ಭಾವ ಸಮರ್ಪಿಸಿದರು.
ಮಧ್ಯ ಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಕಣ್ತುಂಬಿಕೊಳ್ಳಲು ಭಕ್ತರು ಬೆಳಿಗ್ಗೆಯಿಂದಲೇ ಜಾತ್ರೆಗಾಗಿ ನಾಯಕನಹಟ್ಟಿಯತ್ತ ಮುಖ ಮಾಡಿದ್ದರು. ಗುರು ತಿಪ್ಪೇರುದ್ರಸ್ವಾಮಿಯ ಹೊರಮಠ ಹಾಗೂ ಒಳಮಠ ಎರಡೂ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಬಿಡುವಿಲ್ಲದಂತೆ ಪೂಜಾ ಕಾರ್ಯಗಳು ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮಧ್ಯಾಹ್ನ 2 ಗಂಟೆಯಿಂದಲೇ ಒಳಮಠದಲ್ಲಿ ಮುಖ್ಯ ಅರ್ಚಕ ನೇತೃತ್ವದಲ್ಲಿ ಉತ್ಸವ ಮೂರ್ತಿ ಹೊತ್ತು ತರುವ ಪಲ್ಲಕ್ಕಿಯನ್ನು ಧಾರ್ಮಿಕ ವಿಧಿ ವಿಧಾನಗಳಿಂದ ಸಿಂಗರಿಸಲಾಯಿತು. ನಂತರ 2:45 ಸುಮಾರಿಗೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ, ರಥೋತ್ಸವದ ಬಳಿ ತಂದು ಸಜ್ಜುಗೊಳಿಸಲಾಯಿತು. ಮಧ್ಯಾಹ್ನ 3.34ರ ಸುಮಾರಿಗೆ ಚಿತ್ತಾ ನಕ್ಷತ್ರದಲ್ಲಿ ಅಸಂಖ್ಯ ಭಕ್ತರು ತಿಪ್ಪೇರುದ್ರಸ್ವಾಮಿ ರಥವನ್ನು ರಥ ತೇರುಬೀದಿಯಿಂದ ಹೊರಮಠದವರೆಗೆ ಎಳೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ರಥವು ತೇರು ಬೀದಿಯಿಂದ ಪಾದಗಟ್ಟೆಯವರೆಗೆ ಚಲಿಸುವಾಗ ಭಕ್ತರು ರಥಕ್ಕೆ ಬಾಳೆಹಣ್ಣು, ಕಾಳುಮೆಣಸು, ಧವನ, ಹೂವು, ಚೂರು ಬೆಲ್ಲವನ್ನು ಸಮರ್ಪಿಸಿ ತಮ್ಮ ಇಷ್ಠಾರ್ಥವನ್ನು ಈಡೇರಿಸುವಂತೆ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತಾ ‘ ಶ್ರೀ.ತಿಪ್ಪೇರುದ್ರಸ್ವಾಮಿಗೆ ಜಯವಾಗಲಿ’, ‘ಕಾಯಕ ಯೋಗಿಗೆ ಜಯವಾಗಲಿ’ ತಿಪ್ಪೇರುದ್ರಸ್ವಾಮಿ ಮಹಾರಾಜ್ ಕಿ ಜೈ ಎನ್ನುವ ಜಯಘೋಷ ಕೂಗುತ್ತಾ ರಥದ ದೊಡ್ಡ ಗಾತ್ರದ ಮಣಿ ಹಗ್ಗ ಎಳೆದು ಧನ್ಯರಾದರು.ನಾಡಿನ ಸುಭೀಕ್ಷೆ ಹಾಗೂ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು.
ರೂ.61 ಲಕ್ಷಕ್ಕೆ ಮುಕ್ತಿಭಾವುಟ ಹರಾಜು:
ರಥೋತ್ಸವಕ್ಕೂ ಮುನ್ನ ಶ್ರೀ.ತಿಪ್ಪೇರುದ್ರಸ್ವಾಮಿ ಜಾತ್ರೆಯ ವಿಶೇಷಗಳಲ್ಲಿ ಒಂದಾಗಿರುವ ಮುಕ್ತಿ ಬಾವುಟದ ಹರಾಜು ನಡೆಸಲಾಯಿತು. ಸರ್ಕಾರಿ ಸವಾಲು ರೂ.1 ಕೋಟಿಯಿಂದ ಹರಾಜು ಕೂಗು ಪ್ರಾರಂಭವಾಯಿತು. ಆರಂಭದಲ್ಲಿ ಹೀರೆಹಳ್ಳಿ ಮಲ್ಲೇಶ್ ರೂ.5 ಲಕ್ಷಕ್ಕೆ ಮುಕ್ತಿ ಭಾವುಟದ ಹರಾಜು ಕೂಗಿದರು. ನಂತರದಲ್ಲಿ ತಿಮ್ಮನಹಳ್ಳಿ ರಾಜಣ್ಣ, ಚಿತ್ರದುರ್ಗ ಮಹಾಂತೇಶ್, ದಾವಣಗೆರೆ ವಜ್ರ ಮಹೇಶ್, ಹೊನ್ನಾಳಿ ನಾಗೇಶ್ ಅವರು ತುರುಸಿನ ಹರಾಜು ಕೂಗಿದರು.
ಕೊನೆಯಲ್ಲಿ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರೂ.61 ಲಕ್ಷಕ್ಕೆ ಹರಾಜು ಕೂಗಿ ಮುಕ್ತಿ ಬಾವುಟ ಪಡೆದುಕೊಂಡಿದ್ದರು. ಕಳೆದ ವರ್ಷವೂ ರೂ.55 ಲಕ್ಷಕ್ಕೆ ಡಿ.ಸುಧಾಕರ್ ಮುಕ್ತಿ ಬಾವುಟ ಪಡೆದುಕೊಂಡಿದ್ದನ್ನು ಸ್ಮರಿಸಬಹುದು.
ಹರಾಜಿನ ನಂತರ ದೊಡ್ಡ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ದ್ರಾಕ್ಷರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ ಬಾಬು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಸೇರಿದಂತೆ ಮತ್ತಿತರರು ಇದ್ದರು.