ಬೆಂಗಳೂರು: ಹೃದಯ ಶಸ್ತ್ರ ಚಿಕಿತ್ಸೆಯ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೆ ಆಕ್ಟೀವ್ ಆಗಿದ್ದಾರೆ. ವೈದ್ಯರು ಮಾರ್ನಾಲ್ಕು ದಿನ ವಿಶ್ರಾಂತಿ ಪಡೆಯುವುದಕ್ಕೆಂದೆ ಹೇಳಿದ್ದರು ಸಹ, ಲೋಕಸಭಾ ಚುನಾವಣೆಯ ಕೆಲಸದಲ್ಲಿ ತೊಡಗಿದ್ದಾರೆ. ಜೆಡಿಎಸ್ ಕೇಳಿದಂತೆ ಬಿಜೆಪಿ ಮೂರು ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಮಂಡ್ಯ, ಹಾಸನ, ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾಗಿದೆ. ಮಂಡ್ಯ ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರೇ ನಿಲ್ಲುವ ಎಲ್ಲಾ ಸೂಚನೆಗಳು ಸಿಕ್ಕಿವೆ.
ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಮಂಡ್ಯ ಜಿಲ್ಲೆಯ ಜನ ಬಯಸುತ್ತಿದ್ದಾರೆ. ಜೆಡಿಎಸ್ ಪಕ್ಷದ ಶಕ್ತಿ ಉಳಿಸೋಕೆ ನೀವೇ ಬರಬೇಕು ಅಂತ ಆದೇಶ ನೀಡ್ತಾ ಇದ್ದಾರೆ. ನನ್ನ ಪಕ್ಷದ ಭವಿಷ್ಯ ಹಾಗೂ ಕಾರ್ಯಕರ್ತರ ಒತ್ತಾಯದಿಂದ ನಾನೇ ಮಂಡ್ಯ ಚುನಾವಣೆಯಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಇದೆ. ಮಂಡ್ಯ ಜಿಲ್ಲೆಯ ಕಾರ್ಯಕರ್ತರು, ಜನತೆಯೇ ತೀರ್ಮಾನ ಕೊಡಬೇಕಿದೆ. ನಾವೂ ನಿಖಿಲ್ ಕುಮಾರಸ್ವಾಮಿ ಅಥವಾ ಸಿ ಎಸ್ ಪುಟ್ಟರಾಜು ಅವರನ್ನು ನಿಲ್ಲಿಸಬೇಕು ಅಂತ ಇದ್ದೆವು. ಆದರೆ ನಿಖಿಲ್, ನನಗೆ ಆತುರ ಇಲ್ಲ. ಎರಡು ಬಾರಿ ಸೋತಿದ್ದೇನೆ. ಮೂರನೇ ಬಾರಿ ಸೋತರೆ ನನಗೆ ತಡೆಯುವುದಕ್ಕೆ ಆಗಲ್ಲ. ಪಕ್ಷ ಸಂಘಟನೆಗೆ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ ಎಂದು ಹೇಳುವ ಮೂಲಕ ಹೆಚ್ ಡಿ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸುಳಿವನ್ನು ನೀಡಿದ್ದಾರೆ.
ಹಾಸನ, ಮಂಡ್ಯ, ಕೋಲಾರ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಭೆ ಇದೆ. ಹಾಸನಕ್ಕೆ ಪ್ರಜ್ವಲ್ ರೇವಣ್ಣ ಫೈನಲ್ ಆಗಿದೆ. ಕೋಲಾರದಲ್ಲಿ ಸ್ಪರ್ಧೆ ಮಾಡಲು ಮೂವರು ನಾಯಕರ ಶಾರ್ಟ್ ಲೀಸ್ಟ್ ಮಾಡಿದ್ದೇವೆ. ಸಮೃದ್ಧಿ ಮಂಜುನಾಥ್, ಮಲ್ಲೇಶ್ ಬಾಬು, ನಿಸರ್ಗ ನಾರಾಯಣಸ್ವಾಮಿ ಹೆಸರು ಫೈನಲ್ ಮಾಡಿದ್ದೇವೆ ಎಂದಿದ್ದಾರೆ.