ಬೆಂಗಳೂರು: ಇದು ಪರೀಕ್ಷೆಯ ಸಮಯ. ಹೊರಗೆ ಬಂದ್ರೆ ಬಿಸಿಲಿನ ತಾಪ ಮೈ ಸುಡುತ್ತಿದೆ. ಇದರ ಜೊತೆಗೆ ಪರೀಕ್ಷೆ ಎಂಬ ಭಯವೂ ಆವರಿಸಿದೆ. ಇದೇ ವೇಳೆ ಸರ್ಕಾರ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಮಾನವೀಯ ದೃಷ್ಟಿಯಿಂದ ಯೋಚನೆ ಮಾಡಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದಿದ್ದು, ಸೋಮವಾರದಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 25 ರಿಂದ ಏಪ್ರಿಲ್ 6ರ ತನಕ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ. ಈ ಹಿನ್ನೆಲೆ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಲು ಸರ್ಕಾರ ಸೂಚನೆ ನೀಡಿದೆ. ಪರೀಕ್ಷೆ ಮುಗಿಯುವ ತನಕ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ ಮಾಡಿ, ಮಕ್ಕಳಿಗೆ ನೀಡಲು ಸೂಚನೆ ನೀಡಿದೆ.
ಇದರ ಜೊತೆಗೆ ಪರೀಕ್ಚೆ ಬರೆಯಲು ಬರುವ ಮಕ್ಕಳ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ನೀಡಬೇಕು. ಮಕ್ಕಳ ಸುರಕ್ಷತೆ ಹಾಗೂ ಉತ್ತಮ ಗುಣಮಟ್ಟದ ಆರೋಗ್ಯಕರ ಆಹಾರದ ಸ್ವಚ್ಛತೆ ಮತ್ತು ನೈರ್ಮಲ್ಯ ನೋಡಿಕೊಳ್ಳಬೇಕು. ಈ ಅಂಶಗಳಿಗೆ ಶಾಲಾ ಮುಖ್ಯಸ್ಥರು, ನಿರ್ವಾಹಕರು ಹಾಗೂ ಅಡುಗೆ ಸಿಬ್ಬಂದಿ ಆದ್ಯತೆ ನೀಡಬೇಕು. ಮಕ್ಕಳ ಪರೀಕ್ಷೆಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಬಿರು ಬೇಸಿಗೆ ಶುರುವಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಮಕ್ಕಳು ದೂರ ದೂರಿನಿಂದ ಬಂದಿರುತ್ತಾರೆ. ಪರೀಕ್ಷಾ ಕೇಂದ್ರಗಳು ಇರುವುದೆಲ್ಲೋ ಅವರ ಪ್ರಯಾಣ ಸಾಗುವುದು ಇನ್ನೆಲ್ಲೋ. ಹೀಗಾಗಿ ಪರೀಕ್ಷೆ ಮುಗಿಸಿ ಹೋಗುವಾಗ ಮಕ್ಕಳ ಹಸಿವನ್ನು ತೀರಿಸಲು ಸರ್ಕಾರ ಚಿಂತನೆ ನಡೆಸಿದೆ.