ಧಾರವಾಡ: ಈಗಾಗಲೇ ಲೋಕಸಭಾ ಚುನಾವಣೆಯ ಕಣ ಬಿಸಿಯಾಗಿದೆ. ಧಾರಾವಾಡ ಕ್ಷೇತ್ರವೂ ಗಮನ ಸೆಳೆಯುತ್ತಿದೆ. ಈಗಾಗಲೇ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಹ್ಲಾದ್ ಜೋಶಿ ಹಾಗೂ ಕಾಂಗ್ರೆಸ್ ನಿಂದ ವಿನೋದ್ ಅಸೂಟಿ ಅಭ್ಯರ್ಥಿಯಾಗಿದ್ದಾರೆ. ಇದೀಗ ವೀರಶೈವ ಲಿಂಗಾಯತ ಸಮುದಾಯದಿಂದ ಶಿರಹಟ್ಟಿ ಮಠದ ಪೀಠಾಧುಪತಿ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ನಿಲ್ಲುವಂತೆ ಒತ್ತಾಯ ಹಾಕಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ಅವರು ಗದಗ ಜಿಲ್ಲೆಯ ಶಿರಹಟ್ಟಿಯವರು. ಈಗ ಭಕ್ತರೆಲ್ಲ ಸೇರಿಕೊಂಡು ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಲವಂತ ಮಾಡುತ್ತಿದ್ದಾರೆ. ಯಾಕಂದ್ರೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಐದು ಲಕ್ಷಕ್ಕೂ ಹೆಚ್ಚು ಲಿಂಗಾಯತ ಮತಗಳಿವೆ. ಇದೇ ಕಾರಣಕ್ಕೆ ಸ್ವಾಮೀಜಿ ಅವರಿಗೆ ಸ್ಪರ್ಧೆ ಮಾಡುವಂತೆ ಲಿಂಗಾಯತ ಸಮುದಾಯದವರು ಮತ್ತು ಭಕ್ತರು ಒತ್ತಾಯಿಸಿದ್ದಾರೆ. ಸ್ವಾಮೀಜಿ ಅವರು ಹುಬ್ಬಳ್ಳಿ ಕ್ಷೇತ್ರದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಜನರ ಬಳಿ ಬಾಂಧವ್ಯ ಹೊಂದಿದ್ದಾರೆ.
ಇನ್ನು ಪ್ರಹ್ಲಾದ್ ಜೋಶಿ ಅವರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ನಾಲ್ಕು ಬಾರಿ ಗೆದ್ದಿರುವ ಜೋಶಿ ಅವರಿಗೇನೆ ಐದನೇ ಬಾರಿಯೂ ಬಿಜೆಪಿ ಮಣೆ ಹಾಕಿದೆ. ಅದರಲ್ಲೂ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಜೋಶಿ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಕಾಂಗ್ರೆಸ್ ಪಕ್ಷ ಕೂಡ ಅಳೆದು ತೂಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಒಬಿಸಿ ಕೋಟಾಗೆ ನೀಡಬೇಕೆಂಬ ಬೇಡಿಕೆ ಮೇರೆಗೆ ವಿನೋದ್ ಅಸೂಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಇದರ ನಡುವೆ ಇದೀಗ ದಿಂಗಾಲೇಶ್ವರ ಸ್ವಾಮೀಜಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ ಕೇಳಿ ಬಂದಿದೆ.