ಕಾಲಮಾನಕ್ಕೆ ತಕ್ಕಂತೆ ಆಹಾರ, ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳಿ : ಎನ್.ಎಸ್.ಮಂಜುನಾಥ್ ಸಲಹೆ

 

ಚಿತ್ರದುರ್ಗ. ಮಾ.19:  ಬೇಸಿಗೆ ಕಾಲವಾದ್ದರಿಂದ ನಿರ್ಜಲೀಕರಣ ಉಂಟಾಗದಂತೆ ಶುದ್ಧ ಕುಡಿಯುವ ನೀರು ಹಾಗೂ ತಜ್ಞರು ಸೂಚಿಸಿದಂತೆ ಪೌಷ್ಟಿಕಾಂಶವಿರುವ ಆಹಾರ, ಹಣ್ಣುಗಳು, ತರಕಾರಿ ಕಾಲಮಾನಕ್ಕೆ ತಕ್ಕಂತೆ ಆಹಾರ ಪದಾರ್ಥಗಳ ಬಳಕೆ ಮಾಡಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾ ಎನ್.ಎಸ್.ಮಂಜುನಾಥ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಗೊಡಬನಹಾಳ್ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಓಬೇನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಬೇಸಿಗೆ ಕಾಲದಲ್ಲಿ ಆರೋಗ್ಯ ಕಾಪಾಡುವ ಬಗ್ಗೆ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಸಾರ್ವಜನಿಕ ಆರೋಗ್ಯ ಅರಿವು ಮೂಡಿಸಿ ಅವರು ಮಾತನಾಡಿದರು.

ಬೇಸಿಗೆ ಕಾಲವಾದ್ದರಿಂದ ತಾಪಮಾನ ಹೆಚ್ಚುತ್ತಿದ್ದು, ಕುರುಕಲು ತಿಂಡಿಗಳ ಕಡೆಗೆ ಗಮನ ಹರಿಸದೆ, ಜಾತ್ರೆ, ಹಬ್ಬ ಹರಿದಿನಗಳಲ್ಲಿ ಬೀದಿಯಲ್ಲಿ  ಕೊಯ್ದಿಟ್ಟು ಮಾರುವ ಹಣ್ಣುಗಳನ್ನು ಸೇವಿಸಬಾರದು ಎಂದು ತಿಳಿಸಿದ ಅವರು, ದ್ರಾಕ್ಷಿ, ಕಿತ್ತಲೆ, ಸೇವಿಸುವುದು ಒಳಿತು, ಕಲ್ಲಂಗಡಿ ಹಣ್ಣಿನಲ್ಲಿ ನೀರು ಸಮೃದ್ಧವಾಗಿದ್ದು, ಚರ್ಮದ ಕೋಶಗಳನ್ನು ಸೂರ್ಯನ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ದೇಹ ತಂಪಾಗಿರಲು ಸಹಕಾರಿಯಾಗುತ್ತದೆ. ವೈಯಕ್ತಿಕ ಸ್ವಚ್ಛತೆ ಜೊತೆಗೆ ಪರಿಸರ ಸ್ವಚ್ಛತೆ ಕಾಪಾಡಿಕೊಂಡು ಉತ್ತಮ ಆರೋಗ್ಯ ಹೊಂದಬಹುದು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಬೇಸಿಗೆ ಸಮಯದಲ್ಲಿ ಬಿಗಿಯಾದ ಉಡುಪುಗಳನ್ನು ಧರಿಸದೆ ತೆಳುವಾದ ಕಾಟನ್ ಬಟ್ಟೆ ಧರಿಸಬೇಕು. ಆಗಿಂದಾಗೆ ಕೈಗಳ ಸ್ವಚ್ಛತೆ ಕಾಪಾಡಿ, ತಣ್ಣೀರಿನ ಸ್ನಾನ ಮಾಡುವುದರ ಜೊತೆಗೆ ಬೆಳಗಿನ ಸಮಯದಲ್ಲಿ ಕೆಲಸ ಕಾರ್ಯಗಳ ಕಡೆ ಗಮನಹರಿಸಬೇಕು. ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಅನಾವಶ್ಯಕವಾಗಿ ಹೊರಗಡೆ ಓಡಾಡುವುದನ್ನು ತಪ್ಪಿಸುವುದು ಒಳಿತು, ಸುಡು ಬಿಸಿಲಿನಲ್ಲಿ ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದರೆ ದೇಹದ ಉಷ್ಣಾಂಶ ಹೆಚ್ಚಾಗಿ ಸುಸ್ತು, ನೀರಡಿಕೆ, ಕಾಣಿಸಿಕೊಳ್ಳಬಹುದು, ಸೂರ್ಯನ ಶಾಖ ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ದೇಹದ ಬೆವರು ಹೆಚ್ಚಾಗಿ ದುರ್ವಾಸನೆ ಆಗಬಹುದು. ಚರ್ಮರೋಗಕ್ಕೆ ದಾರಿ ಮಾಡಿಕೊಡಬಹುದು. ಮತ್ತು ಜೀರ್ಣಕ್ರಿಯೆಗೆ  ಬಾಳೆಹಣ್ಣು ಸೇವನೆ ಮಾಡುತ್ತಾ ಗರ್ಭಿಣಿ ಹೆಣ್ಣು ಮಕ್ಕಳು ಆಗಾಗ್ಗೆ ದ್ರವರೂಪದ ಆಹಾರ ಸೇವನೆ ಮಾಡಿ, ಮಧ್ಯಾಹ್ನ 2 ತಾಸು ತಪ್ಪದೇ ಮಲಗುವುದು ಒಳ್ಳೆಯದು ಎಂದರು.

ವೈದ್ಯರಲ್ಲಿ ಸಕಾಲಕ್ಕೆ ಪರೀಕ್ಷೆ ಮತ್ತು ಚಿಕಿತ್ಸೆ ಪಡೆದು ಮಾನಸಿಕ ನೆಮ್ಮದಿಯಿಂದ ಆರೋಗ್ಯ ಕಾಪಾಡಬೇಕು. “ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ” ಕಲುಷಿತ ನೀರು ಮತ್ತು ಕಲುಷಿತ ಆಹಾರದಿಂದ  ಹರಡಬಹುದಾದ ರೋಗಗಳನ್ನು ತಡೆಯಲು ಸೂಕ್ತ ಮಾರ್ಗೋಪಾಯಗಳನ್ನು ಅನುಸರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಮಧುಸೂದನ್, ಸಮುದಾಯ ಆರೋಗ್ಯ ಅಧಿಕಾರಿ ಉಸ್ನ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಜೆ.ರಾಜೇಶ್ವರಿ, ಆಶಾ ಕಾರ್ಯಕರ್ತೆ ಜಯಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ತಿಮ್ಮಕ್ಕ ಸೇರಿದಂತೆ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *