ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಈ ಬಾರಿ ಟಿಕೆಟ್ ಘೋಷಣೆ ಮಾಡಿದೆ. ಅದರಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಳಬರಿಗೇನೆ ಟಿಕೆಟ್ ಮಿಸ್ ಆಗಿದೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಈ ಬಾರಿ ಶೋಭಾ ಕರಂದ್ಲಾಜೆಗೆ ಈ ಕ್ಷೇತ್ರವನ್ನು ಬಿಟ್ಟು ಕೊಡಲಾಗಿದೆ. ಇದು ಸದಾನಂದ ಗೌಡರ ಬೇಸರಕ್ಕೆ ಕಾರಣವಾಗಿದೆ.
ಇಂದು ಸದಾನಂದಗೌಡರ ಹುಟ್ಟುಹಬ್ಬ ಕೂಡ. ಹೀಗಾಗಿ ಅಸಮಾಧಾನಗೊಂಡ ಗೌಡರನ್ನು ಶೋಭಾ ಕರಂದ್ಲಾಜೆ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಹುಟ್ಟು ಹಬ್ಬಕ್ಕೆ ಶುಭಕೋರಿ ಬಂದಿದ್ದಾರೆ. ಇದರ ನಡುವೆ ಡಿವಿ ಸದಾನಂದಗೌಡರನ್ನು ಕಾಂಗ್ರೆಸ್ ಪಕ್ಷ ಸೆಳೆದಿದೆ ಎಂಬುದು ಚರ್ಚೆಯಾಗುತ್ತಿದೆ. ಸದಾನಂದ ಗೌಡರು ಆ ಕಡೆಗೆ ಒಲವು ತೋರಿದ್ದಾರೆ ಎಂದೇ ಹೇಳಲಾಗುತ್ತಿದೆ.
ಈ ಬಗ್ಗೆ ಸ್ವತಃ ಸದಾನಂದ ಗೌಡರೇ ಪ್ರತಿಕ್ರಿಯೆ ನೀಡಿದ್ದು, ಇಂದು ನನ್ನ ಹುಟ್ಟು ಹಬ್ಬ. ಈ ಬಗ್ಗೆ ಕುಟುಂಬದವರ ಜೊತೆಗೆ ಮಾತುಕತೆ ನಡೆಸಬೇಕಿದೆ. ನಾಳೆ ಬೆಳಗ್ಗೆ ಸುದ್ದಿಗೋಷ್ಟಿ ನಡೆಸಿ, ನನ್ನ ನಿಲುವನ್ನು ಪ್ರಕಟಿಸುತ್ತೇನೆ. ನಿನ್ನೆ ನಮ್ಮ ಮನೆಗೆ ಆಗಮಿಸಿ, ನಮ್ಮ ಪಕ್ಷದ ಪ್ರಮುಖರೊಬ್ಬರು ಮಾತಿಕತೆ ನಡೆಸಿದ್ದಾರೆ. ಈಗ ಯಾವುದನ್ನು ಹೇಳುವುದಕ್ಕೆ ಆಗುವುದಿಲ್ಲ. ನಾಳೆ ಎಲ್ಲವನ್ನು ಸುದ್ದಿಗೋಷ್ಟಿ ಮೂಲಕ ತಿಳಿಸುತ್ತೇನೆ. ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕ ಮಾಡಿರುವುದು ಸತ್ಯ ಎಂದಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಿ ವಿ ಸದಾನಂದಗೌಡರು ಸಹ ಉತ್ತರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅದನ್ನ ಹಲವು ಸಲ ಹೇಳಿದ್ದರು ಕೂಡ, ಪಕ್ಷ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅವರ ಹೆಸರೇ ಇಲ್ಲ. ಹೀಗಾಗಿ ಅಸಮಾಧಾನಗೊಂಡಿದ್ದಾರೆ.