ಕಲಬುರಗಿ: ಲೋಕಸಭಾ ಚುನಾವಣಾ ಹಿನ್ನೆಲೆ ಈಗಾಗಲೇ ಪ್ರಚಾರ ಕಾರ್ಯ ಆರಂಭವಾಗಿದೆ. ಅದರಲ್ಲೂ ಇಂದಿನಿಂದ ಪ್ರಧಾನಿ ಮೋದಿಯವರೇ ರಾಜ್ಯಕ್ಕೆ ಆಗಮಿಸಿ, ಪ್ರಚಾರದಲ್ಲಿ ತೊಡಗಿಕೊಳ್ಳುತ್ತಾರೆ. ಇಂದು ಕಲಬುರಗಿಗೆ ಭೇಟಿ ನೀಡಿದ್ದು, ನಂತರದ ದಿನಗಳಲ್ಲಿ ಶಿವಮೊಗ್ಗಕ್ಕೂ ಭೇಟಿ ನೀಡಲಿದ್ದಾರೆ. ಟಿಕೆಟ್ ಕೈತಪ್ಪಿದ ಪರಿಣಾಮ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗಿದೆ. ಅದರಲ್ಲೂ ಕೆ ಎಸ್ ಈಶ್ವರಪ್ಪ ಬಂಡಾಯದ ಮಾತುಗಳನ್ನಾಡಿದ್ದಾರೆ.
ಈ ಬಗ್ಗೆ ಕಲಬುರಗಿಯಲ್ಲಿ ಬಿವೈ ವಿಜಯೇಂದ್ರ ಅವರು ಮಾತನಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿದ್ದಾಗ 26 ಕ್ಷೇತ್ರಗಳನ್ನು ಗೆದ್ದಿದ್ದೆವು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲಬೇಕು ಈ ಗೆಲುವಿನ ಸವಾಲು ನಮಗಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರ ಆಡಳಿತದಿಂದ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ನವರು ಜಾತಿ ಜಾತಿ ಎತ್ತಿಕಟ್ಟುವ ಹುನ್ನಾರದಿಂದ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಜನ ಇದಕ್ಕೆಲ್ಲ ತಕ್ಕ ಉತ್ತರ ನೀಡಲಿದ್ದು, ನಾವೂ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲಲಿದ್ದೇವೆ. ಬೆಳಗಾವಿ ವಿಚಾರದಲ್ಲಿ ಇನ್ನೂ ಅಂತಿಮವಾಗಿಲ್ಲ. ಕೇಂದ್ರದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಎರಡು ಮೂರು ದಿನದಲ್ಲಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದನ್ನು ಹೈಕಮಾಂಡ್ ತಿಳಿಸಲಿದೆ.
ಇದೆ ವೇಳೆ ಈಶ್ವರಪ್ಪ ಅವರ ಬಗ್ಗೆ ಮಾತನಾಡಿ, ಕೆ ಎಸ್ ಈಶ್ವರಪ್ಪ ಅವರು ಪಕ್ಷದ ಹಿರಿಯರು. ಪಕ್ಷದ ಸಂಘಟನೆಯಲ್ಲಿ ತಮ್ಮದೇ ಕೊಡುಗೆ ನೀಡಿದವರು. ನಮ್ಮ ಪಕ್ಷದ ಹಿರಿಯ ಮುಖಂಡರು ಈಶ್ವರಪ್ಪ ಅವರ ಜೊತೆಗೆ ಸಂಪರ್ಕದಲ್ಲಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರನ್ನು ಹಾವೇರಿಗೆ ಘೋಷಿಸಿದ್ದು ವಿಜಯೇಂದ್ರ ಅಲ್ಲ. ನಮ್ಮ ಕೇಂದ್ರದ ಪಾರ್ಲಿಮೆಂಟರಿ ಬೋರ್ಡ್ ತೀರ್ಮಾನ ಮಾಡಿದೆ. ನನಗೆ ನಂಬಿಕೆ ಇದೆ. ನಮ್ಮ ವರಿಷ್ಠರು ಈಶ್ವರಪ್ಪ ಅವರ ಮನವೊಲಿಸುತ್ತಾರೆ ಎಂದಿದ್ದಾರೆ.