ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, 05 : ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತು ಉನ್ನತ ಹುದ್ದೆ ಅಲಂಕರಿಸಬೇಕಾದರೆ ಶಿಕ್ಷಣ ಬಹಳ ಮುಖ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಡಾ.ಹೆಚ್.ಗುಡ್ಡದೇಶ್ವರಪ್ಪ ಹೇಳಿದರು.
ನ್ಯಾಯಾಧೀಶ ಹುದ್ದೆಗೆ ನೇಮಕಗೊಂಡಿರುವ ಕೋಡೇನಹಟ್ಟಿಯ ಟಿ.ಸುಮರವರನ್ನು ನಾಯಕ ಸಮಾಜದ ವತಿಯಿಂದ ಸನ್ಮಾನಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಹೆಚ್ಚು ಶ್ರಮಿಕರಿರುವ ಈ ಗ್ರಾಮದಲ್ಲಿ ಟಿ.ಸುಮ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಎರಡು ಬಾರಿ ಪ್ರಯತ್ನಿಸಿ ಮೂರನೆ ಬಾರಿಗೆ ಯಶಸ್ವಿಯಾಗಿದ್ದಾರೆ. ತಂದೆ ತಿಪ್ಪೇಸ್ವಾಮಿ ಆಟೋ ಚಾಲಕ, ತಾಯಿ ಗೃಹಿಣಿಯಾಗಿದ್ದುಕೊಂಡು ಮಗಳಿಗೆ ಕಾನೂನು ಶಿಕ್ಷಣ ಕೊಡಿಸಿರುವುದು ಕಮ್ಮಿ ಸಾಧನೆಯಲ್ಲ. ಸಂವಿಧಾನದಡಿ ಎಲ್ಲರಿಗೂ ಸಮಾನವಾದ ಅವಕಾಶವಿದೆ. ಬಳಸಿಕೊಂಡು ಮೇಲೆ ಬರಬೇಕು ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್‍ರವರು ನೀಡಿರುವ ಸಂವಿಧಾನ ಶೋಷಿತ ಸಮಾಜವನ್ನು ಬಡಿದೆಬ್ಬಿಸುತ್ತಿದೆ. ನ್ಯಾಯಾಧೀಶೆಯಾಗಿ ನೇಮಕಗೊಂಡಿರುವ ಟಿ.ಸುಮರವರ ಮುಂದೆ ಸಾಕಷ್ಟು ಸವಾಲುಗಳಿವೆ. ದುರ್ಬಲರು, ಶೋಷಿತರಿಗೆ ನ್ಯಾಯ ಒದಗಿಸಬೇಕು. ಘನತೆಯಿರುವ ಹುದ್ದೆಗೆ ಏರಿ ನಾಯಕ ಸಮಾಜ ಹಾಗೂ ಕೋಡೇನಹಟ್ಟಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಜೀವನದಲ್ಲಿ ಇನ್ನು ಉನ್ನತ ಸ್ಥಾನಕ್ಕೆ ಏರಲಿ ಎಂದು ಶುಭ ಹಾರೈಸಿದರು.
ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ಟಿ.ಸುಮ ನ್ಯಾಯಾಧೀಶರಾಗಿ ನೇಮಕಗೊಂಡಿರುವುದು ಕೇವಲ ನಾಯಕ ಸಮಾಜಕ್ಕಷ್ಟೆ ಅಲ್ಲ ಇಡೀ ಕೋಡೇನಹಟ್ಟಿ ಗ್ರಾಮವೇ ಖುಷಿ ಪಡುವ ವಿಚಾರ. ಎಲ್ಲರ ಆಶೀರ್ವಾದ ಅವರ ಮೇಲಿರಲಿ ಎಂದು ಹೇಳಿದರು.
ನಗರಸಭೆ ಸದಸ್ಯ ವೆಂಕಟೇಶ್, ಮಾಜಿ ಸದಸ್ಯ ತಿಪ್ಪೇಸ್ವಾಮಿ, ನಾಯಕ ಸಮಾಜದ ಮುಖಂಡರುಗಳಾದ ಡಿ.ಗೋಪಾಲಸ್ವಾಮಿ ನಾಯಕ, ಮಹಂತೇಶ್, ಯುವ ನ್ಯಾಯವಾದಿ ಅಶೋಕ್‍ಬೆಳಗಟ್ಟ, ಸಣ್ಣಸ್ವಾಮಿ, ತಿಪ್ಪೇಸ್ವಾಮಿ, ಮಂಜುನಾಥ, ಚನ್ನಕೇಶವ, ಬೈಯಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.