ಲೋಕಸಭಾ ಚುನಾವಣೆಗೆ ಇನ್ನು ಪಕ್ಷಗಳು ಅಭ್ಯರ್ಥಿಗಳ ಫೈನಲ್ ಪಟ್ಟಿ ರಿಲೀಸ್ ಮಾಡಿಲ್ಲ. ಈಗ ಹಂತ ಹಂತವಾಗಿ ಪಟ್ಟಿಯನ್ನು ರಿಲೀಸ್ ಮಾಡುತ್ತಿದ್ದಾರೆ. ಬಿಜೆಪಿ ಈಗಾಗಲೇ ಮೊದಲ ಪಟ್ಟಿ ರಿಲೀಸ್ ಮಾಡಿದ್ದು, ಕರ್ನಾಟಕದಿಂದಾನೂ ಹಲವರಿಗೆ ಟಿಕೆಟ್ ಘೋಷಣೆ ಮಾಡಿದೆ. ಇದರ ಮಧ್ಯೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೂ ಚುನಾವಣಾ ಪ್ರಚಾರ ಜೋರಾಗಿದೆ. ಟಿಕೆಟ್ ಸ್ಪರ್ಧೆಯೂ ಜೋರಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸೋಲು ಕಂಡಿದ್ದ ಕೆ ಸುಧಾಕರ್ ಈ ಬಾರಿ, ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ. ಇದರ ನಡುವೆ ಯಲಹಂಕ ಶಾಸಕ ವಿಶ್ವನಾಥ್ ಅವರು ಕೂಡ ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ ಸಿಗುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ ಆಕ್ಟೀವ್ ಆಗಿದ್ದಾರೆ.
ಹೈಕಮಾಂಡ್ ನಾಯಕರ ಗಮನ ಸೆಳೆಯುವುದಕ್ಕಾಗಿ ಇಂದು ನಮೋ ವಿಜಯಸಂಕಲ್ಪ ಯಾತ್ರೆ ಮಾಡಿದ್ದಾರೆ. ಸಾವಿರಾರು ಕಾರುಗಳ ಮೂಲಕ ರ್ಯಾಲಿ ನಡೆಸಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಯಲಂಕದಿಂದ ಆರಂಭವಾದ ಕಾರುಗಳ ರ್ಯಾಲಿ ದೊಡ್ಡಬಳ್ಳಾಪುರ-ಗೌರಿಬಿದನೂರು-ಗುಡಿಬಂಡೆ-ಬಾಗೇಪಲ್ಲಿ- ಚಿಕ್ಕಬಳ್ಳಾಪುರ-ದೇವನಹಳ್ಳಿ- ಹೊಸಕೋಟೆ ಗೆ ತಲುಪುವ ಮೂಲಕ ಭರ್ಜರಿ ರ್ಯಾಲಿ ನಡೆಸಿ ಮಗ ಅಖಾಡಕ್ಕಿಳಿಯೋಕೆ ಸರ್ವ ಸನ್ನದ್ದರಾಗುತ್ತಿದ್ದಾರೆ. ಅಷ್ಟೇ ಅಲ್ಲ ಬಾಗೇಪಲ್ಲಿ ಯ ಬೀಚಗಾನಹಳ್ಳಿ ಬಳಿ ಬಿಜೆಪಿ ಕಾರ್ಯಕರ್ತರಿಗೆ ಭರ್ಜರಿ ಬಿರಿಯಾನಿ ಚಿಕನ್ ಸಾಂಬಾರ್ ಕೋಳಿ ಮೊಟ್ಟೆ ಬಾಳೆಹಣ್ಣು ಅಂತ ಬಾಡೂಟ ಸಹ ಹಾಕಿಸಿದರು. ಇನ್ನೂ ಟಿಕೆಟ್ ವಿಚಾರದಲ್ಲಿ ತಮ್ಮ ಎದುರಾಳಿ ಮಾಜಿ ಸಚಿವ ಸುಧಾಕರ್ ಸ್ವಕ್ಷೇತ್ರ ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ಸೇಬುಗಳ ಹಾರದ ಮೂಲಕ ವಿಶ್ವನಾಥ್ ಹಾಗೂ ಮಗ ಅಲೋಕ್ ವಿಶ್ವನಾಥ್ ಅವರನ್ನ ಬರಮಾಡಿಕೊಂಡು ಅದ್ದೂರಿ ಸ್ವಾಗತ ಕೋರಲಾಯಿತು.