ಹಾಸನ: ಈಗಾಗಲೇ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಸಹಜವಾಗಿಯೇ ಜನರಿಗೆ ಕುತೂಹಲವಿರುತ್ತದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ್ದು, ಅಭ್ಯರ್ಥಿ ಆಯ್ಕೆ ಮಾಡಲು ಸಮಸ್ಯೆ ಏನು ಇಲ್ಲ. ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.
ಇದೇ ವೇಳೆ ಪಾಕ್ ಪರ ಘೋಷಣೆ ಕೂಗಿದ್ದರ ವಿಡಿಯೋವನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಲಾಗಿದೆ. ಈಗಾಗಲೇ ವರದಿ ಬಂದಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್, ವಾಗ್ದಾಳಿ ನಡೆಸಿದ್ದರು. ಅದರ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವರದಿ ಬಂದ ಕೂಡಲೇ ಬಹಿರಂಗಪಡಿಸುತ್ತೇವೆ. ಈ ಸಂಬಂಧ ಯಾರೇ ತಪ್ಪು ಮಾಡಿದರು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಭಾರತದಲ್ಲಿ ಇದ್ದುಕೊಂಡು ಬೇರೆ ದೇಶದ ಪರ ನಿಷ್ಠೆ ಹೊಂದಿರುವವರಿಗೆ ಶಿಕ್ಷೆ ಖಂಡಿತ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ದೇಶ ಭಕ್ತಿ ಹೇಳಿ ಕೊಡಬೇಕಾ? ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಯಾರು? ಅವರು ರಾಜಕೀಯಕ್ಕೋಸ್ಕರ ಏನೋ ಹೇಳ್ತಾರೆ, ಅದು ಬೇರೆ ವಿಚಾರ. ಅವರು ಏನಾದರೂ ಆ ತರ ಕೂಗಿದ್ರೆ ಕಠಿಣವಾದ ಕ್ರಮ ತೆಗೆದುಕೊಳ್ತೇವೆ. ಜಾತಿಗಣತಿ ವರದಿ ಸಲ್ಲಿಸಿದೆ. ವರದಿಯಲ್ಲಿ ಏನಿದೆ ಎಂದು ಇನ್ನೂ ನೋಡಿಲ್ಲ ಎಂದು ಜಾತಿ ಗಣತಿ ವರದಿ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಅವರ ಸ್ಪಷ್ಟ ಹೇಳಿಕೆ ನೀಡಿದ್ದಾರೆ.