ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 29. : ಹೊಲಿಗೆ ತರಬೇತಿಯನ್ನು ಪರಿಪೂರ್ಣವಾಗಿ ಕಲಿಯುವ ಮೂಲಕ ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ ಸ್ವಸಹಾಯ ಸಂಘದ ಮಹಿಳೆಯರಿಗೆ ಕರೆ ನೀಡಿದರು.
ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದಲ್ಲಿ ಮೂರು ತಿಂಗಳು ನಡೆದ ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಸರ್ಟಿಫಿಕೇಟ್‍ಗಳನ್ನು ವಿತರಿಸಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಇಂತಹ ಅನೇಕ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದೆ. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿರದೆ ಟೈಲರಿಂಗ್ ಮತ್ತಿತರೆ ತರಬೇತಿಗಳನ್ನು ಕಲಿಯುವ ಮೂಲಕ ಮನೆಯಲ್ಲೇ ಕುಳಿತು ಹಣ ಸಂಪಾದನೆ ಮಾಡಬಹುದು ಎಂದು ಹೇಳಿದರು.
ರುಡ್‍ಸೆಟ್ ಸಂಸ್ಥೆ ನಿರ್ದೇಶಕಿ ಶ್ರೀಮತಿ ರಾಧ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನಪ್ಪ, ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ತಾಲ್ಲೂಕು ಯೋಜನಾಧಿಕಾರಿ ಬಿ.ಅಶೋಕ್, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರೇಮ, ರುಡ್‍ಸೆಟ್ ಸಂಸ್ಥೆ ಉಪನ್ಯಾಸಕ ತೋಟಪ್ಪ, ವಲಯ ಮೇಲ್ವಿಚಾರಕ ಮಧು, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಸುಧಾ, ಸೇವಾ ಪ್ರತಿನಿಧಿ ಸುಶೀಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.