ಬೆಂಗಳೂರು : ನಗರದ ಹೃದಯ ಭಾಗದಲ್ಲಿರುವ ಬೆಲೆಬಾಳುವ ಪಶುಸಂಗೋಪನೆ ಇಲಾಖೆಯ ಎರಡು ಎಕರೆ ಜಾಗವನ್ನು ಮುಸ್ಲಿಮರಿಗೆ ನೀಡುವ ಹುನ್ನಾರ ಮಾಡುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯನವರೇ, ಮುಸ್ಲಿಮರ ಓಲೈಕೆಗೆ ಒಂದು ಇತಿ ಮಿತಿ ಬೇಡವೇ? ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ.
ದನ ಕರುಗಳಿಗೆ ಚಿಕಿತ್ಸೆ ನೀಡುವ ಸರ್ಕಾರಿ ಪಶು ಚಿಕಿತ್ಸಾಲಯವನ್ನ ಮುಚ್ಚಿಸಿ ಅದನ್ನ ಮುಸ್ಲಿಂರಿಗೆ ಕೊಡುವ ಅನಿವಾರ್ಯತೆ ಆದರೂ ಏನಿತ್ತು? ಜಾನುವಾರುಗಳಿಗೆ ಮಾತ್ರ ಆ ಚಿಕಿತ್ಸಾಲಯ ಸ್ಥಾಪಿಸಿಲ್ಲ. ಇತರೆ ಸಾಕು ಪ್ರಾಣಿಗಳ ಚಿಕಿತ್ಸೆಗೂ ಸ್ಥಾಪಿಸಲಾಗಿತ್ತು. ನಗರದ ಹೃದಯಭಾಗದಲ್ಲಿರುವ ಐನೂರು ಕೋಟಿಗೂ ಹೆಚ್ಚು ಬೆಲೆ ಬಾಳುವ ಜಾಗವನ್ನು ಹಸ್ತಾಂತರ ಮಾಡಲು ನಾವು ಬಿಡುವುದಿಲ್ಲ.
ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್ ಎಂದು ಕರೆಯಬಹುದೇ? ಎಂದು ಟ್ವೀಟ್ ಮಾಡಿದ್ದಾರೆ.
ಪ್ರಸ್ತಾವನೆಯಲ್ಲಿ, ಕ್ರಮ ಸಂಖ್ಯೆ(1)ರ ಏಕಕಡತದಲ್ಲಿ, ಸರ್ಕಾರದ ಕಾರ್ಯದರ್ಶಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು ಇವರು ರಾಜ್ಯದಲ್ಲಿ ಅಲ್ಪಸಂಖ್ಯಾತರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೂಲಕ 126 ವಸತಿ ಶಾಲೆಗಳು, 314 ವಿದ್ಯಾರ್ಥಿ ನಿಲಯಗಳು 200 ಮೌಲಾನಾ ಆಜಾದ್ ಮಾದರಿ ಶಾಲೆಗಳು, 101 ವಸತಿ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಮಾನ್ಯ ವಸತಿ, ವಕ್ಸ್ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಇವರು ಟಿಪ್ಪಣಿಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚಲುವಾಧಿಪಾಳ್ಯ ವಾರ್ಡ್, ಮೈಸೂರು ರಸ್ತೆ ಹಾಗೂ ಗೂಡ್ ಶೆಡ್ ರಸ್ತೆ ಹೊಂದಿಕೊಂಡಂತೆ ಪಶುಸಂಗೋಪನಾ ಇಲಾಖೆಯ ಪಶು ಚಿಕಿತ್ಸಾಲಯವಿದ್ದು, ಬೆಂಗಳೂರು ನಗರ ಪ್ರದೇಶದಲ್ಲಿ ಜಾನುವಾರುಗಳ ಸಾಕಣೆ ಕಡಿಮೆ ಇರುವುದರಿಂದ ಬೆಂಗಳೂರು ಕೇಂದ್ರ ಭಾಗದಲ್ಲಿರುವ ಪಶು ಚಿಕಿತ್ಸಾಲಯವು ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಾಗಿದೆ. ಆದುದ್ದರಿಂದ ಪಶುಚಿಕಿತ್ಸಾಲಯವನ್ನು ಬೆಂಗಳೂರು ಹೊರ ವಲಯಕ್ಕೆ ಸ್ಥಳಾಂತರಿಸಿ. ಸದರಿ ಸ್ಥಳದಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಸೂಚಿಸಿರುತ್ತಾರೆ.