ಪಾಕಿಸ್ತಾನ ಬಿಜೆಪಿಯ ಶತ್ರು, ನಮಗಲ್ಲ. ಅದು ನಮ್ಮ ನೆರೆಯ ರಾಷ್ಟ್ರ : ಬಿ.ಕೆ. ಹರಿಪ್ರಸಾದ್

2 Min Read

 

ಸುದ್ದಿಒನ್, ಬೆಂಗಳೂರು : ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತಿನ ಸಮರ ತಾರಕಕ್ಕೇರಿದೆ. ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರ ಬೆಂಬಲಿಗರೊಬ್ಬರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದರು. ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು,  ಬಿಜೆಪಿ ನಾಯಕರು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಮುಗಿಬಿದ್ದಿದ್ದಾರೆ.

ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ನಾಯಕರು ರಾಜ್ಯಸಭಾ ಚುನಾವಣೆಯ ಸೋಲಿನ ಹತಾಶೆಯಿಂದ ಈ ರೀತಿಯ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಉಪ ಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ಟೀಕೆಗಳಿಗೆ ತಿರುಗೇಟು ನೀಡುವ ಭರದಲ್ಲಿ ಕಾಂಗ್ರೆಸ್ ಎಂಎಲ್ ಸಿ ಬಿ.ಕೆ. ಹರಿಪ್ರಸಾದ್ ಹೇಳಿರುವ ಈ ಮಾತು ಇದೀಗ ಟೀಕೆ ತೀವ್ರ ಟೀಕೆಗೆ ಗುರಿಯಾಗಿದೆ.

ಬಿಜೆಪಿಗೆ ಪಾಕಿಸ್ತಾನ ಶತ್ರುವಾಗಬಹುದೇನೋ ಆದರೆ ಕಾಂಗ್ರೆಸ್‌ನ ನೆರೆಯ ರಾಷ್ಟ್ರ ಎಂಬ ಕಾಂಗ್ರೆಸ್ ಎಂಎಲ್‌ಸಿ ಬಿ‌.ಕೆ. ಹರಿಪ್ರಸಾದ್‌ ಹೇಳಿಕೆ ಇದೀಗ ಸಂಚಲನ ಮೂಡಿಸಿದೆ. ಆದರೆ ಹರಿಪ್ರಸಾದ್ ಅವರು ಬಿಜೆಪಿಯನ್ನು ಟೀಕಿಸುವ ಸಂದರ್ಭದಲ್ಲಿ ಮಾಡಿದ ಹೇಳಿಕೆಗಳು ಬಿಜೆಪಿಯ ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿವೆ. ಈ ಹಿನ್ನಲೆಯಲ್ಲಿ ಈಗಾಗಲೇ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳಿಂದ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತಿನ ಸಮರ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ದೇಶ ವಿರೋಧಿ ಭಾವನೆ ಮೂಡಿಸುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಬಿಜೆಪಿಗೆ ಪಾಕಿಸ್ತಾನ ಶತ್ರು ದೇಶ, ಆದರೆ ಪಾಕಿಸ್ತಾನ ನಮಗೆ ಶತ್ರುವಲ್ಲ, ಅದು ನಮ್ಮ ನೆರೆಯ ರಾಷ್ಟ್ರ ಎಂದು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಹರಿಪ್ರಸಾದ್ ಹೇಳಿದ್ದರು. ಬಿಜೆಪಿ ಪಾಕಿಸ್ತಾನವನ್ನು ಶತ್ರು ದೇಶ ಎಂದು ಪರಿಗಣಿಸುತ್ತಿದೆ. ಇತ್ತೀಚೆಗೆ ಬಿಜೆಪಿ ಹಿರಿಯ ಮುಖಂಡ ಎಲ್. ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದೆ. ಅವರು ಲಾಹೋರ್‌ಗೆ ಹೋಗಿ ಮೊಹಮ್ಮದ್ ಅಲಿ ಜಿನ್ನಾ ಅವರ ಸಮಾಧಿ ಬಳಿ ಅವರಂತಹ ಜಾತ್ಯತೀತ ನಾಯಕ ಇಲ್ಲ ಎಂದು ಹೇಳಿದ್ದರು. ಆಗ ನಿಮಗೆ ಪಾಕಿಸ್ತಾನ ಶತ್ರು ರಾಷ್ಟ್ರವಾಗಿ ಕಾಣಲಿಲ್ಲವಾ ಎಂಬ ಹರಿಪ್ರಸಾದ್ ಹೇಳಿಕೆ ಇದೀಗ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಆದರೆ ಹರಿಪ್ರಸಾದ್ ಅವರ ಈ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ಭಾರತದ ವಿರುದ್ಧ 4 ಬಾರಿ ಯುದ್ದ ಮಾಡಿದ್ದರೂ ಕಾಂಗ್ರೆಸ್ ಪಾಕಿಸ್ತಾನವನ್ನು ಶತ್ರು ರಾಷ್ಟವನ್ನಾಗಿ ಕಾಣುತ್ತಿಲ್ಲ.  ಕಾಂಗ್ರೆಸ್ ಪಕ್ಷವು ದೇಶ ವಿರೋಧಿ ಭಾವನೆ ಹೊಂದಿದೆ ಎಂದು ಟೀಕಿಸಿದರು. ಹರಿಪ್ರಸಾದ್ ಹೇಳಿಕೆಯಿಂದ ಪಾಕಿಸ್ತಾನದ ಬಗ್ಗೆ ಕಾಂಗ್ರೆಸ್ ಪಕ್ಷದ ಧೋರಣೆ ಸ್ಪಷ್ಟವಾಗಿದೆ. ಜವಾಹರಲಾಲ್ ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ನಡುವಿನ ಆಪ್ತತೆ ಇಂದಿಗೂ ಮುಂದುವರೆದಿದೆ ಎಂದು ಸ್ಪಷ್ಟವಾಗಿ ಕಾಣುತ್ತದೆ ಎಂದು ಬಿಜೆಪಿ ಆರೋಪಿಸಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ಪರ ಕಾಂಗ್ರೆಸ್ ನಿಂತಿದ್ದಲ್ಲದೆ, ಭಾರತದ ವಿರುದ್ಧ ಸಮರ ಸಾರಿದ ಪಾಕಿಸ್ತಾನವನ್ನು ಶತ್ರು ರಾಷ್ಟ್ರ ಎಂದು ಹೇಳದಿರುವುದು ಕಾಂಗ್ರೆಸ್ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *