ಬೆಂಗಳೂರು: ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪಾಕಿಸ್ತಾನದ ಘೋಷಣೆಯ ಬಗ್ಗೆಯೇ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿದವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಕಾಡಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದನದಲ್ಲಿ ಇಂದು ಮೈತ್ರಿ ಪಕ್ಷಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದವು. ಈ ವಿಚಾರ ಇನ್ನಷ್ಟು ತೀವ್ರತೆ ಪಡೆದುಕೊಳ್ಳುವ ಮುನ್ನವೇ ಕುಮಾರಸ್ವಾಮಿ ಅವರು ಅನಾರೋಗ್ಯಕ್ಕೆ ಈಡಾಗಿದ್ದಾರೆ. ತೀವ್ರ ಜ್ವರ, ಶೀತ, ಕೆಮ್ಮು ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಅದ್ಯಾವುದನ್ನು ಲೆಕ್ಕಿಸದೆ ಕಲಾಪಕ್ಕೆ ಬಂದಿದ್ದರು. ಗದ್ದಲದ ನಡುವೆ ದೇಹಕ್ಕೆ ಆಯಾಸವಾಗಿದೆ. ಹೆಚ್ಚು ಸಮಯ ಕೂರಲು ಆಗದೆ, ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಧಾನಸೌಧದಿಂದ ನೇರವಾಗಿ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ವೈದ್ಯರ ತಂಡ ಕುಮಾರಸ್ವಾಮಿ ಅವರನ್ನು ಗಮನಿಸುತ್ತಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ. ಜ್ವರ, ಶೀತ ಇರುವ ಕಾರಣ ಕೊಂಚ ವಿಶ್ರಾಂತಿಯ ಅಗತ್ಯವೂ ಇದೆ ಎಂದಿದ್ದಾರೆ ವೈದ್ಯರು.
ನಿನ್ನೆ ಕಾಂಗ್ರೆಸ್ ಪಕ್ಷ ರಾಜ್ಯಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದೆ. ಐದನೇ ಅಭ್ಯರ್ಥಿ ಹಾಕಿದರು ಮೈತ್ರಿ ಪಕ್ಷದ ಸ್ಟಾಟರ್ಜಿ ನಡೆಯದೆ, ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ವೇಳೆ ಕಾಂಗ್ರೆಸ್ ನಿಂದ ಗೆದ್ದ ಅಭ್ಯರ್ಥಿಗಳ ಸಂಭ್ರಮಾಚರಣೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಆರೋಪ ಬಂದಿದೆ. ಈ ವಿಚಾರವನ್ನಿಟ್ಟುಕೊಂಡು ನಿನ್ನೆಯಿಂದ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿವೆ ಮೈತ್ರಿ ಪಕ್ಷ. ಆದರೆ ಈ ಘಟನೆ ನಡೆದಿಲ್ಲ. ಒಂದು ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರೆ ಅವರಿಗೆ ಕಠಿಣ ಶಿಕ್ಷೆಯಾಗುತ್ತೆ ಎಂದೇ ಸಿಎಂ, ಗೃಹ ಸಚಿವರು ತಿಳಿಸಿದ್ದಾರೆ.