ಹಿರಿಯೂರು : ಈ ಬಾರಿ ಮಳೆಯಿಲ್ಲದೆ ನೀರಿಗೆ ಬರ ಬಂದಿದೆ. ಅದರಲ್ಲೂ ಹಳ್ಳ-ಕೊಳ್ಳಗಳೆಲ್ಲಾ ಖಾಲಿಯಾಗಿವೆ. ಜನ-ಜಾನುವಾರುಗಳಿಗೆ ನೀರಿನ ಹಾಹಾಕಾರ ಶುರುವಾಗಿದೆ. ಈಗಾಗಲೇ ನಗರಗಳಲ್ಲಿ ಜನ ಕುಡಿಯುವುದಕ್ಕೂ ಹಣ ಕೊಟ್ಟು ನೀರು ತರಿಸುತ್ತಿದ್ದಾರೆ. ಇದರ ನಡುವೆ ತಾಲ್ಲೂಕಿನ ದಿಂಡವಾರ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು, ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು, ಪಂಚಾಯಿತಿ ಮುಂಭಾಗದಲ್ಲಿ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ಉಲ್ಬಣಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ದಿಂಡವಾರ ಗ್ರಾಮದಲ್ಲಿ ಸುಮಾರು 10 ರಿಂದ 15 ಕುಡಿಯುವ ನೀರಿನ ಬೋರ್ ವೆಲ್ ಗಳಿದ್ದು, ಯಾವುದರಲ್ಲೂ ನೀರು ಬರುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಈ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಕೇಳಿಕೊಂಡರೆ ಪಂಚಾಯಿತಿ ಅಧ್ಯಕ್ಷ ಸ್ಪಂದಿಸುತ್ತಿಲ್ಲವಂತೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಸಹಾಯಕ ಇಂಜಿನಿಯರ್ ಭಾಷಾ ಭೇಟಿ ನೀಡಿ, ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದಾಗ, ಪ್ರತಿಭಟನೆ ಹಿಂಪಡೆದರು.