ಕೃಷಿ ಮಾಡುವುದು ಎಂದರೆ ಸುಲಭದ ಕೆಲಸವಲ್ಲ. ಅದರಲ್ಲೂ ಅಡಿಕೆ – ತೆಂಗು ಬೆಳೆಯುವುದಕ್ಕೆ ಐದು ವರ್ಷಗಳ ಕಾಲ ಮಕ್ಕಳನ್ನು ಸಾಕಿದಂತೆ ಸಾಕುತ್ತಾರೆ. ಅಷ್ಟು ಕಷ್ಟ ಪಟ್ಟು, ನಿಷ್ಠೆಯಿಂದ ಸಾಕಿ ಬೆಳೆಸಿದ ಗಿಡಗಳನ್ನು ನೆಲಸಮ ಮಾಡಿದರೆ ರೈತನ ಮನಸ್ಥಿತಿ ಏನಾಗಬಹುದು. ಅಂಥದ್ದೆ ಒಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಭದ್ರಾವತಿ-ತರಿಕೆರೆ ಗಡಿ ಪ್ರದೇಶದಲ್ಲಿರುವ ಲಕ್ಕವಳ್ಳಿಯ ಗೋಪಾಲ ಗ್ರಾಮದಲ್ಲಿ ಇರುವ ರೈತ ಸುರೇಶ್ ಸುಮಾರು ಒಂದು ಎಕರೆಯಲ್ಲಿ ಅಡಿಕೆ ತೋಟ ಮಾಡಿದ್ದಾರೆ. ಸುಮಾರು 450-500 ಅಡಿಕೆ ಗಿಡಗಳನ್ನು ಬೆಳೆದಿದ್ದರು. ಆದರೆ ಇಷ್ಟು ಗಿಡಗಳನ್ನು ಅಧಿಕಾರಿಗಳು ನಾಶ ಮಾಡಿದ್ದಾರೆ. ಆರ್ ಐ, ವಿಲೇಜ್ ಅಕೌಂಟೆಂಟ್, ಗ್ರಾಮ ಪಂಚಾಯತ್ ಸದಸ್ಯರು ಸೇರಿ ನಾಶ ಮಾಡಿದ್ದಾರೆ. ರೈತ ಸುರೇಶ್ ಗೋಗರೆದರು ಬಿಟ್ಟಿಲ್ಲ. ಸರ್ಕಾರಿ ಜಾಗವೆಂದು ಇದ್ದಬದ್ದ ಗಿಡಗಳನ್ನೆಲ್ಲ ಕತ್ತರಿಸಿ ಹಾಕಿದ್ದಾರೆ.
40 ವರ್ಷದಿಂದ ಉಳುಮೆ ಮಾಡಿಕೊಂಡು ಬಂದಿದ್ದರು. ಸಕ್ರಮಕ್ಕಾಗಿ ನ್ಯಾಯಾಲಯಕ್ಕೆ ಫಾರಂ ನಂ. 53 ರಲ್ಲಿ ಅರ್ಜಿ ಸಲ್ಲಿಸಿದ್ದರು. ಮುಗಿಲೇಶ್ವರಿ ಎಂಬುವವರ ಹೆಸರಿನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣ ನ್ಯಾಯಾಲಯದಲ್ಲಿದ್ದರು ಏಕಾಏಕಿ ಬಂದು ಅಡಿಕೆ ತೋಟ ನಾಶಪಡಿಸಿದ್ದಾರೆ. ಗ್ರಾ.ಪಂ. ಅಧಿಕಾರಿಗಳು ಊರಿನ ಸ್ಮಶಾನಕ್ಕೆ ಜಾಗ ಬೇಕೆಂದು ತೋಟ ನಾಶ ಮಾಡಿದ್ದಾರೆ. ತೋಟ ಕಟ್ಟಿದ ಕಾರಣ, ಬದಲಿ ಭೂಮಿ ನೀಡುತ್ತೇವೆಂದು ಹೇಳಿದ್ರೂ ಅಧಿಕಾರಿಗಳು ಒಪ್ಪದೆ ಅಡಿಕೆ ಮರಗಳನ್ನು ಕತ್ತರಿಸಿದ್ದಾರೆ. ಖಾಲಿ ಜಾಗ ನೀಡುತ್ತೇವೆಂದು ತಹಶೀಲ್ದಾರ್ ಗೆ ಹೇಳಿದ್ದರೂ ಕೂಡ ಮಾತು ಕೇಳದ ಪಂಚಾಯಿತಿ ಸದಸ್ಯರು ಮರ ಕಡಿದಿದ್ದಾರೆ ಎಂದು ರೈತ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.