ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ, ಹಿರಿಯೂರು ಬಂದ್ ಗೆ ಕರೆ ನೀಡಲಾಗಿದೆ. ಬುಧವಾರ ಬಂದ್ ಮಾಡುವುದಾಗಿ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕರೆ ನೀಡಿದೆ. ಹಿರಿಯೂರು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಈ ಸಂಬಂಧ ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ಸೋಮವಾರ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆದಿದೆ. ಈ ಸಭೆಯಲ್ಲಿ ದಲಿತ, ಕನ್ನಡಪರ ಸಂಘಟನೆಗಳು ಪಾಲ್ಗೊಂಡು ಬಂದ್ ಯಶಸ್ಸಿಗೆ ದನಿ ಗೂಡಿಸುವ ಭರವಸೆ ನೀಡಿವೆ. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ತಾಲೂಕು ಬಂದ್ ಆಚರಿಸುತ್ತಿದೆ. ಚಿತ್ರದುರ್ಗ, ಚಳ್ಳಕೆರೆ, ನಾಯಕನಹಟ್ಟಿ ಬಂದ್ ಗೆ ನಾಗರಿಕರು ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಜಿಸಿದ್ದಾರೆ. ಹಿರಿಯೂರು ಬಂದ್ ಗೂ ಅದೇ ಮಾದರಿಯಲ್ಲಿ ಬೆಂಬಲ ಸಿಗಲಿದೆ ವಿವಿ ಸಾಗರಕ್ಕೆ ಐದು ಟಿಎಂಸಿ ನೀರು ಹರಿಸಲು ಬಂದ್ ಮೂಲಕ ಆಗ್ರಹಿಸಲಾಗುವುದು ಎಂದರು.
ಕಳೆದ ವರ್ಷ ಜಲಾಶಯ ತುಂಬಿದ್ದರೂ ಒಂದೇ ವರ್ಷಕ್ಕೆ ಹದಿನೈದು ಅಡಿಯಷ್ಟು ನೀರು ಇಳಿದಿದೆ. ಈ ವರ್ಷ ಮಳೆಯಾಗದಿದ್ದರೆ ಪರಿಸ್ಥಿತಿ ಭೀಕರವಾಗಲಿದೆ. ವಿವಿ ಸಾಗರದಲ್ಲಿ ನೀರು ಕಾಯ್ದುಕೊಳ್ಳುವ ಸಂಬಂಧ ತಾಲೂಕಿನ ಜನತೆ ಸದಾ ಜಾಗೃತರಾಗಬೇಕು. ಈ ಸಂಬಂಧ ನಡೆಯುವ ಎಲ್ಲ ಹೋರಾಟಗಳಿಗೆ ಬೆಂಬಲ ಸೂಚಿಸಬೇಕು. ಹಿರಿಯೂರಿನ ಎಲ್ಲ ದಲಿತ, ಕನ್ನಡಪರ ಸಂಘಟನೆಗಳು, ವಕೀಲರ ಸಂಘ ಬಂದ್ ಗೆ ಬೆಂಬಲ ಸೂಚಿಸಿರುವುದು ಸಂತಸದ ಸಂಗತಿ. ಹೋರಾಟದ ಇದೇ ಕಿಚ್ಚನ್ನು ಕಾಯ್ದುಕೊಂಡು ಹೋಗಬೇಕು ಎಂದರು.
ನ್ಯಾಯವಾದಿ ಸುರೇಶ್ ಮಾತನಾಡಿ, ಹಿರಿಯೂರು ಬಂದ್ ಗೆ ಎಲ್ಲರೂ ಸಂಘಟಿತರಾಗಿ ಬೀದಿಗಿಳಿಯೋಣ. ಸಂಘಟನೆಗಳ ನಡುವೆ ಏನೇ ವೈಮನಸ್ಸು ಇದ್ದರೂ ಈ ವಿಚಾರದಲ್ಲಿ ಒಗ್ಗಟ್ಟು ತೋರೋಣ. ಫೆ.21 ರ ಬಂದ್ ಯಶಗೊಳಿಸೋಣವೆಂದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ಭದ್ರಾ ಕಾಮಗಾರಿ ಮುಗಿಸುತ್ತೇವೆ ಎಂಬ ಒಂದು ಸಾಲಿನ ಭರವಸೆ ನೀಡಿಲ್ಲ.ಈ ಸರ್ಕಾರ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಮುಗಿಸುತ್ತದೆ ಎಂಬ ಭರವಸೆಗಳು ಇಲ್ಲ. ಕೇಂದ್ರ ಸರ್ಕಾರದ ನೆರವನ್ನು ಬಜೆಟ್ ನಲ್ಲಿ ತೋರಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿಐದು ಮಂದಿ ಕಾಂಗ್ರೆಸ್ ಶಾಸಕರು ಇದ್ದಾರೆ. ಹಿರಿಯೂರು ಕ್ಷೇತ್ರವನ್ನು ಸಚಿವ ಡಿ.ಸುಧಾಕರ್ ಪ್ರತಿನಿಧಿಸುತ್ತಿದ್ದಾರೆ. ಹಿರಿಯೂರು ಜನರ ಜವಾಬ್ದಾರಿ ಹೆಚ್ಚಿದ್ದು ಸಚಿವರ ಮೇಲೆ ಒತ್ತಡ ಹಾಕಿ ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸೋಣ. ಕೇಂದ್ರ ಸರ್ಕಾರ ಘೋಷಿಸಿದ 5300 ಕೋಟಿ ರು ಅನುದಾನ ಬಿಡುಗಡೆಗೆ ಬಂದ್ ಮೂಲಕ ಆಗ್ರಹಿಸೋಣ. ಬಂದ್ ವೇಳೆ ಎಲ್ಲಿಯೂ ಅಹಿತಕರ ಘಟನೆಗಳು ಆಗದಂತೆ ಎಚ್ಚರವಹಿಸಬೇಕು. ಸ್ವಯಂ ಪ್ರೇರಿತ ಬಂದ್ ಕಡೆ ಗಮನ ಹರಿಸೋಣವೆಂದು ಹೇಳಿದರು.