ಬೆಂಗಳೂರು: ಮಾಜಿ ಶಾಸಕ ಗೋಪಾಲಯ್ಯ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪದ್ಮರಾಜ್, ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ಇಂದು ಬಂಧಿಸಿದ ಬಳಿಕ ಪೊಲೀಸರು, ಪದ್ಮರಾಜ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. 39ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ.
ಜಾಮೀನು ಪಡೆದು ಹೊರಗೆ ಬರುತ್ತಿದ್ದಂತೆ ಆರ್ ಅಶೋಕ ಅವರ ಮೇಲೆಯೂ ಒಂದು ಕೋಟಿ ರೂಪಾಯಿ ಆರೋಪ ಮಾಡಿದ್ದಾರೆ. ‘2010ರಲ್ಲಿ ಬಿಜೆಪಿ ನಾಯಕ ಆರ್ ಅಶೋಕ್, ನನ್ನನ್ನು ಮೇಯರ್ ಮಾಡುತ್ತೇನೆಂದು ನಂಬಿಸಿ ಒಂದು ಕೋಟಿ ರೂಪಾಯಿ ಹಣ ಪಡೆದಿದ್ದರು. ಆದರೆ ಇವತ್ತಿಗೂ ಮೇಯರ್ ಮಾಡಿಲ್ಲ ಎಂದಿದ್ದಾರೆ. ಇದೇ ವೇಳೆ ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಬಗ್ಗೆ ಮಾತನಾಡಿ, ಇದು ಸತ್ಯಕ್ಕೆ ದೂರವಾದ ಮಾತು. ಕೊಲೆ ಬೆದರಿಕೆ ಹಾಕುವಂತ ವ್ಯಕ್ತಿ ನಾನಲ್ಲ. ಮಂಜುನಾಥನ ಮೇಲೆ ಆಣೆ ನಾನು ಬೆದರಿಕೆ ಹಾಕಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ. ಗುತ್ತಿಗೆ ಕೊಡಿಸುವ ವಿಚಾರಕ್ಕೆ 15 ಲಕ್ಷ ಹಣ ಕೊಟ್ಟಿದ್ದೆ. ಬಳಿಕ ಗುತ್ತಿಗೆ ಕೊಡಿಲಿಲ್ಲ. ಅದಕ್ಕೆ ಕಾಲ್ ಮಾಡಿದ್ದೆ. ಆಗ ಒಂದಿಷ್ಟು ಮಾತುಕತೆಗಳು ನಡೆದವು. ಆದರೆ ಯಾವುದೇ ರೀತಿಯ ಬೆದರಿಕೆಗಳನ್ನು ಹಾಕಿಲ್ಲ ಎಂದಿದ್ದಾರೆ.
ಮಧ್ಯರಾತ್ರಿ ಗೋಪಾಲಯ್ಯ ಅವರ ಫೋನ್ ಗೆ ಕರೆ ಮಾಡಿ, ಹಣ ಕೊಡದೆ ಹೋದರೆ ಸುಮ್ಮನೆ ಇರುವುದಿಲ್ಲ. ನಿನ್ನ ಜೀವಂತವಾಗಿ ಬಿಡುವುದಿಲ್ಲ. ತಾಕತ್ತಿದ್ದರೆ ನಮ್ಮ ಮನೆ ಬಳಿ ಎಂದು ಪದ್ಮರಾಜ್ ಜೀವ ಬೆದರಿಕೆ ಹಾಕಿದ್ದಾರೆಂದು ಮಾಜಿ ಸಚಿವ ಗೋಪಾಲಯ್ಯ ರಾತ್ರೋರಾತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.