ಸುದ್ದಿಒನ್, ಹಿರಿಯೂರು, ಫೆಬ್ರವರಿ.11 : ಕಾನೂನು ಸುವ್ಯವಸ್ಥೆ ಕಾಪಾಡುವುದರ ಮೂಲಕ ಶಾಂತಿ, ನೆಮ್ಮದಿ ವಾತಾವರಣ ನಿರ್ಮಾಣ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಸಿಪಿಐ ಷಣ್ಮುಖಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣಾ ಆವರಣದಲ್ಲಿ ಅಬ್ಬಿನಹೊಳೆ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ದಲಿತ ದಿನಾಚರಣೆ ಹಾಗೂ ಕುಂದುಕೊರತೆಗಳ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ವೈಷಮ್ಯ ಬೆಳೆಸಿಕೊಳ್ಳದೆ ಒಬ್ಬರಿಗೊಬ್ಬರು ಸಾಮರಸ್ಯರಿಂದ ನೆಮ್ಮದಿಯ ಸಂಸಾರದ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.
ಪಿಎಸ್ಐ ಬಾಹುಬಲಿ ಪಡನಾಡ ಮಾತನಾಡಿ ದಲಿತರ ಮೇಲೆ ಯಾವುದೇ ರೀತಿಯ ದೌರ್ಜನ್ಯ, ದಬ್ಬಾಳಿಕೆ ನಡೆದರೆ ಎಂದಿಗೂ ಸಹಿಸುವುದಿಲ್ಲ ಯಾರ ಒತ್ತಡಕ್ಕೆ ಮಣಿಯದೆ ಪಾರದರ್ಶಕ ರೀತಿಯಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ದಲಿತರು ಮೊದಲು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಆದ್ಯತೆ ನೀಡಬೇಕು. ಗ್ರಾಮಗಳಲ್ಲಿ ಸೌಹಾರ್ದಯುತವಾಗಿ ಜೀವನ ನಡೆಸಿ ಎಂದು ಸಲಹೆ ನೀಡಿದರು.
ಅಪಘಾತ, ಜಮೀನು, ಜಾಗೈ ವಿವಾದದಗಳ ಬಗ್ಗೆ ದಾಖಲಾಗಿರುವ ಇನ್ನಿತರ ಪ್ರಕರಣಗಳನ್ನು ತಮ್ಮದೇ ರೀತಿಯಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ನೊಂದವರಿಗೆ ನ್ಯಾಯ ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಿಎಸ್ಐ ಮಂಜುನಾಥ್, ದಲಿತ ಮುಖಂಡರಾದ ಕಂಬತ್ತಹಳ್ಳಿ ರಂಗಸ್ವಾಮಿ, ಕೆಪಿ ಶ್ರೀನಿವಾಸ್, ಈಶ್ವರಪ್ಪ, ಚಿದಾನಂದ್, ಕೃಷ್ಣಪ್ಪ , ಖಂಡೇನಹಳ್ಳಿ ಈಶ್ವರಪ್ಪ, ಹೇಮಂತ್ ಗೌಡ, ಪೊಲೀಸ್ ಸಿಬ್ಬಂದಿಗಳಾದ ಎಸ್. ನಾಗರಾಜ್, ರುದ್ರೇಶ್ , ಗಗನ್, ಕೆ. ನಾಗರಾಜ್, ಸೇರಿದಂತೆ ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯ ದಲಿತ ಮುಖಂಡರು ಭಾಗವಹಿಸಿದ್ದರು.