ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.10 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ.12 ರಂದು ಮಂಡಿಸಲಿರುವ ಬಜೆಟ್ ರೈತ ಪರವಾಗಿರಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ವಾಸುದೇವಮಟ್ಟಿ ಒತ್ತಾಯಿಸಿದರು.
ಪ್ರವಾಸಿ ಮಂದಿರದಲ್ಲಿ ಶನಿವಾರ ರೈತರ ಜೊತೆ ಸಭೆ ನಡೆಸಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳಾಯಿತು. ನೀರಾವರಿ ಯೋಜನೆಗಳು ಕುಂಠಿತಗೊಂಡಿದೆ. ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಅರೆಬರೆಯಾಗಿದೆ. ಆಲಮಟ್ಟಿ ಅಣೆಕಟ್ಟೆ ಎತ್ತರಗೊಳಿಸುವುದು, ಮಹದಾಯಿ ಯೋಜನೆ, ಬೆಣ್ಣೆಹಳ್ಳಿ, ಬಸವೇಶ್ವರ ಏತ ನೀರಾವರಿ ಯೋಜನೆ, ಇವೆಲ್ಲವುಗಳು ಪೂರ್ಣಗೊಳ್ಳಬೇಕಾಗಿರುವುದರಿಂದ ಬಜೆಟ್‍ನಲ್ಲಿ ಅನುದಾನ ಮೀಸಲಿಡಬೇಕು.
ಉಚಿತ ಭಾಗ್ಯಗಳಿಗೆ 52 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುವ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವ ಯೋಜನೆಗಳಿಗೆ ಏಕೆ ಹಣ ಮೀಸಲಿಡುತ್ತಿಲ್ಲ ಎಂದು ವಾಸುದೇವಮಟ್ಟಿ ಪ್ರಶ್ನಿಸಿದರು?
ಬೆಳೆ ವಿಮೆ, ಫಸಲ್‍ಭೀಮ ಯೋಜನೆ ಇನ್ನು ರೈತರಿಗೆ ತಲುಪಿಲ್ಲ. ವಿಮೆ ಕಂಪನಿ ಹಾಗೂ ರೈತರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆ ಕರೆದು ಚರ್ಚಿಸಿ ರೈತ ಪರ ಬಜೆಟ್ ಮಂಡಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷೆ ಡಾ.ಹೆಚ್.ಪುಷ್ಪ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್, ಲೋಲಾಕ್ಷಮ್ಮ, ವಿಜಯಗೌಡ, ಜಯಲಕ್ಷ್ಮಿ, ಪವಿತ್ರ, ಬಸವರಾಜ್, ಪ್ರಸನ್ನ, ಎಸ್.ನವೀನ್ ಇನ್ನು ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.