ನವದೆಹಲಿ: ಚುನಾವಣೆ ಎಂದಾಗ ಮಂಡ್ಯ ನೆಲ ಎಲ್ಲಾ ಕಡೆಯೂ ಹೈಲೇಟ್ ಆಗುತ್ತದೆ. ಬಿಸಿಬಿಸಿ ಚರ್ಚೆಗೆ ಗ್ರಾಸವಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸಾಕಷ್ಟು ಗಮನ ಸೆಳೆದುತ್ತು. ಈಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಇಂಥ ಸಮಯದಲ್ಲೂ ಮಂಡ್ಯ ರಣಕಣ ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲೂ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡ ಬಳಿಕವಂತೂ, ಮಂಡ್ಯದ ಬಗ್ಗೆ ಜನ ಮಾತನಾಡದ ದಿನಗಳೇ ಇಲ್ಲ.
ಬಿಜೆಪಿ ಜೊತೆಗೆ ಕೈ ಜೋಡಿಸಿದ ಮೇಲಂತೂ ಮಾಜಿ ಸಿಎಂ ಕುಮಾರಸ್ವಾಮಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಮುನಿಸು ತೋರಿದ ಬಿಜೆಪಿ ನಾಯಕರನ್ನು ಸಮಾಧಾನಗೊಳಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಬಿಡದಿಯ ತೋಟದ ಮನೆ, ರಾಜಕೀಯ ಚರ್ಚೆಗೆ ಒಳ್ಳೆ ಸ್ಥಳವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕಾರಣ, ಮಂಡ್ಯ ಕ್ಷೇತ್ರವನ್ನು ಬಿಜೆಪಿ, ಜೆಡಿಎಸ್ ಗೆ ಬಿಟ್ಟುಕೊಡಬೇಕಾದ ಪರಿಸ್ಥಿತಿ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ ಕೊನೆಗೆ ಸುಮಲತಾ ಗೆದ್ದಿದ್ದರು. ಆದರೆ ಈಗ ಬಿಜೆಪಿಗೆ ಸೇರಿರುವ ಸುಮಲತಾಗೆ, ಮಂಡ್ಯದಿಂದ ಟಿಕೆಟ್ ಕೈತಪ್ಪುವ ಸಾಧ್ಯತೆಯೇ ಹೆಚ್ಚಾಗಿದೆ. ಇದರ ನಡುವೆ ಸುಮಲತಾ ಅವರು ನೇರ ದೆಹಲಿಯಿಂದಾನೇ ಟಿಕೆಟ್ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ ನಡ್ಡಾ ಅವರನ್ನು ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್. ಸಂತೋಷ್ ಅವರನ್ನು ಅನೌಪಚಾರಿಕವಾಗಿ ಇಂದು ಭೇಟಿ ಭೇಟಿ ಮಾಡಿ ಮಂಡ್ಯ ಕ್ಷೇತ್ರ ಹಾಗೂ ಲೋಕಸಭಾ ಚುನಾವಣೆ ಕುರಿತಂತೆ ಚರ್ಚಿಸಲಾಯಿತು. ತಮ್ಮ ಅಮೂಲ್ಯ ಸಮಯವನ್ನು ನೀಡಿ, ನನ್ನ ಮಾತುಗಳನ್ನು ಆಲಿಸಿದ ಶ್ರೀ ನಡ್ಡಾ ಜಿ ಅವರಿಗೂ ಶ್ರೀ ಸಂತೋಷ್ ಜಿ ಅವರಿಗೂ ಧನ್ಯವಾದಗಳು. ತಮ್ಮ ಸಹಕಾರದ ಮಾತುಗಳಿಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.