ಬೆಂಗಳೂರು: ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆಗೊಳಿಸಿದ್ದಾರೆ. ರಾಜ್ಯಕ್ಕೆ ಕೇಂದ್ರದಿಂದ ಬರುತ್ತಿರುವ ತೆರಿಗೆ ಪಾಲು ಹಾಗೂ ಇನ್ನಿತರೆ ಅನುದಾನಗಳು ಹೆಚ್ಚಾಗುವ ಬದಲು ಕಡಿಮೆ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
2018-19ರಲ್ಲಿ ಕೇಂದ್ರ ಬಜೆಟ್ ನ ಒಟ್ಟು ಗಾತ್ರ 24,42,213 ಕೋಟಿ ರೂಪಾಯಿ ಇತ್ತು. ಆಗ ತೆರಿಗೆ ಪಾಲು 35,858 ಕೋಟಿ ಮತ್ತು ಕೇಂದ್ರ ಪುರಸ್ಕೃತ ಯೋಜನೆಯಡಿ 16,082 ಕೋಟಿ ಅನುದಾನ ಸಿಗುತ್ತಾ ಇತ್ತು. ಎರಡರಿಂದ ಒಟ್ಟಾರೆ 46,288 ಕೋಟಿಗಳಷ್ಟು ಸಂಪನ್ಮೂಲಗಳು ಲಭಿಸಿದ್ದವು. ಆದರೆ 2023-24ರ ಸಾಲಿನಲ್ಲಿ ಕೇಂದ್ರದ ಬಜೆಟ್ ಗಾತ್ರ 45,03,097 ಕೋಟಿ. ಆದರೆ ಈ ಬಾರಿ ಒಟ್ಟಾರೆ 50,257 ಕೋಟಿ ಮಾತ್ರ ಸಿಗುವ ಅಂದಾಜು ಮಾಡಲಾಗಿದೆ.
2018-19ಕ್ಕೆ ಹೋಲಿಕೆ ಮಾಡಿದರೆ 2023-24ರಲ್ಲಿ ಬಜೆಟ್ ಗಾತ್ರ ಬಹುಪಾಲು ದುಪ್ಪಟ್ಟಾಗಿದೆ. ಈ ಲೆಕ್ಕದಲ್ಲಿ ನೋಡಿದರೂ ಕನಿಷ್ಠ 1 ಲಕ್ಷ ಕೋಟಿ ರೂಪಾಯಿ ಕೊಡಬೇಕಿತ್ತು. ನಮಗೆ ವರ್ಷಕ್ಕೆ 50 ಸಾವಿರ ಕೋಟಿಯಾದರೂ ಕೊಡಬಹುದಾದುದ್ದನ್ನು ಕೊಡುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ನಾಡು ಭೀಕರ ಬರದಿಂದ ತತ್ತರಿಸಿದೆ, ರಾಜ್ಯದ 216 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದ್ದು, ಒಟ್ಟು ರೂ.33,770 ಕೋಟಿ ನಷ್ಟ ಸಂಭವಿಸಿದೆ. ಕೇಂದ್ರ ಸರ್ಕಾರಕ್ಕೆ ರೂ.17,901 ಕೋಟಿ ಬರ ಪರಿಹಾರ ಬಿಡುವಂತೆ ಕೋರಿ 4 ತಿಂಗಳುಗಳು ಕಳೆದರೂ ಈ ವರೆಗೆ ನಯಾಪೈಸೆ ಪರಿಹಾರದ ಹಣ ಬಿಡುಗಡೆಯಾಗಿಲ್ಲ.
ಕರುನಾಡಿಗೆ ಯಾಕೆ ಈ ಅನ್ಯಾಯ ನರೇಂದ್ರ ಮೋದಿ ಅವರೇ? ನಮ್ಮವರು ಶ್ರಮದಿಂದ ಕಟ್ಟಿದ ತೆರಿಗೆ ಹಣ ನಮ್ಮವರ ಕಷ್ಟಕಾಲಕ್ಕೆ ಬಾರದಿದ್ದರೆ ಏನು ಉಪಯೋಗ? ಎಂದು ಪ್ರಶ್ನಿಸಿದ್ದಾರೆ.