ಹಾವೇರಿ: ಲೋಕಸಭೆ ಚುನಾವಣೆಗೆ ಈಗಾಗಲೇ ಸಾಕಷ್ಟು ಸಿದ್ಧತೆ ನಡೆಯುತ್ತಿದೆ. ಇದರ ನಡುವೆ ಬಹಳ ದಿನಗಳ ಹಿಂದಿನಿಂದಲೂ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದೇ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೇಳುತ್ತಲೆ ಬರುತ್ತಿದ್ದಾರೆ. 135 ಕ್ಷೇತ್ರಗಳಲ್ಲಿ ಚುನಾವಣೆ ಗೆದ್ದಿರುವ ಕಾಂಗ್ರೆಸ್ ಸರ್ಕಾರ ಬೀಳುವುದು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ನಾಯಕರು ತಿರುಗೇಟು ನೀಡುತ್ತಿದ್ದಾರೆ.
ಇದೀಗ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡ ಲೋಕಸಭೆ ಚುನಾವಣೆಯ ಬಳಿಕ ಸರ್ಕಾರ ಬೀಳಲಿದೆ ಎಂದೇ ಹೇಳಿದ್ದಾರೆ. ನಾನು ಗ್ಯಾರಂಟಿ ಕೊಡುತ್ತೇನೆ, ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ರಾಜ್ಯದಲ್ಲಿ ಮುಂದೆ ಬಿಜೆಪಿ ಸರ್ಕಾರವೇ ಬರಲಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರು ರೈತರನ್ನು ಕಡೆಗಣಿಸಿದ್ದಾರೆ. ಹೀಗಾಗಿ ರೈತರ ಪಾಲಿಗೆ ಸರ್ಕಾರ ಸತ್ತು ಹೋಗಿದೆ. 200 ಯೂನಿಟ್ ವಿದ್ಯುತ್ ಯಾರಿಗೆ ಕೊಟ್ಟಿದ್ದೀರಿ. ಒಬ್ಬರ ಹೆಸರು ಹೇಳಿ ನೋಡೋಣಾ. ಗೃಹಲಕ್ಷ್ಮೀ ಯೋಜನೆಯ ಹಣ ಒಂದು ತಿಂಗಳು ಬಂದರೆ ಇನ್ನೊಂದು ತಿಂಗಳು ಬರುವುದಿಲ್ಲ. ಗ್ಯಾರಂಟಿ ಕೊಡುವುದರಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಬರಗಾಲವಿದ್ದರು, ರೈತರಿಗೆ ಕರೆಂಟ್ ಕೊಡುತ್ತಿಲ್ಲ. ಒಂದು ಕೈನಲ್ಲಿ ಕೊಟ್ಟು ಹತ್ತು ಕೈನಲ್ಲಿ ತೆಗೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಆರ್ಥಿಕವಾಗಿ ಸಂಪೂರ್ಣವಾಗಿ ದಿವಾಳಿಯಾಗಿದೆ. ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಲಿ ನಡೆಸಿದ್ದಾರೆ.
ಈಗಾಗಲೇ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ಸ್ವತಂತ್ರವಾಗಿಯೇ ಸ್ಪರ್ಧಿಸಲು ತಯಾರಿ ನಡೆಸಿದ್ದರೆ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡು ಸ್ಪರ್ಧೆ ನಡೆಸಲು ಮುಂದಾಗಿದೆ.