ಬೆಂಗಳೂರು: ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸಿಎಂ ಹಾಗೂ ಡಿಸಿಎಂ ಮೇಲೆ ಹರಿಹಾಯ್ದಿದ್ದಾರೆ. ಮುಸ್ಲಿಮರ ಓಲೈಕೆಯಲ್ಲೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಭಾರಿ ಪೈಪೋಟಿ ನಡೆಸುತ್ತಿದ್ದಾರೆ ಎಂದಿದ್ದಾರೆ.
ಮೊನ್ನೆ ತಾನೇ ರಾಜ್ಯದಲ್ಲಿ ಮುಸ್ಲಿಂ ಪರ ಸರ್ಕಾರ ಇದೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಮುಸ್ಲಿಮರ ದಯೆಯಿಂದ ಎಂದು ಹಿಂದೂ ಮತದಾರರಿಗೆ ಅಪಮಾನ ಮಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲೆ ಪೈಪೋಟಿ ಬಿದ್ದಂತೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊಹಲ್ಲಾ ಅಭಿವೃದ್ಧಿಗೆ 1,000 ಕೋಟಿ ರೂಪಾಯಿ ನೀಡಲು ಮುಂದಾಗಿದ್ದಾರೆ.
ಮೋಹಲ್ಲಾಗಳಿಗೆ 1000 ಕೋಟಿ ರೂಪಾಯಿ ನೀಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣ ಇದೆ. ಆದರೆ ಬರ ಬಂದು ಎಂಟು ತಿಂಗಳಾದರೂ ರೈತರಿಗೆ 2,000 ರೂಪಾಯಿ ಪರಿಹಾರ ನೀಡಲು ಹಣವಿಲ್ಲ. ಸಿಎಂ ಸಿದ್ದರಾಮಯ್ಯ ನವರೇ, ಮುಸ್ಲಿಮರ ತುಷ್ಟೀಕರಣ ಮಾಡಲು ನಿಮ್ಮ ಕಾಂಗ್ರೆಸ್ ಪಕ್ಷ ಯಾವ ಮಟ್ಟಕ್ಕಾದರೂ ಹೋಗುತ್ತದೆ ಎಂದು ಪದೇ ಪದೇ ನಿರೂಪಿಸುತ್ತಲೇ ಇದ್ದೀರಿ. ಆದರೆ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಅನ್ನ ನೀಡುವ ರೈತರನ್ನೂ ನಿಮ್ಮ ಓಲೈಕೆ ರಾಜಕಾರಣದಲ್ಲಿ ಬಲಿಪಶು ಮಾಡಬೇಡಿ.
ಬರದಿಂದ ಹೈರಾಣಾಗಿ 800ಕ್ಕೂ ಹೆಚ್ಚು ರೈತರು ಈಗಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಕ್ಷಾಂತರ ಕೃಷಿ ಕಾರ್ಮಿಕರು ಮನೆ ಮಠ ಬಿಟ್ಟು ಗುಳೆ ಹೋಗಿದ್ದಾರೆ. ತಮ್ಮ ಕಲ್ಲು ಹೃದಯ ಕರಗಲು ಇನ್ನೆಷ್ಟು ರೈತರ ಬಲಿಯಾಗಬೇಕು? ಈ ಕೂಡಲೇ ರೈತರ ಖಾತೆಗೆ ಪರಿಹಾರ ತಲುಪುವಂತೆ ಕ್ರಮ ಕೈಗೊಳ್ಳಿ. ನಿಮ್ಮ ಕೈಲಾಗಾದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದಿದ್ದಾರೆ.