ಮಂಡ್ಯ: ಹನುಮ ಧ್ವಜದ ವಿಚಾರಕ್ಕೆ ಮಂಡ್ಯದ ಕೆರಗೋಡು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಹನುಮ ಧ್ವಜ ಇಳಿಸುವ ಜಿಲ್ಲಾಡಳಿತದ ನಿರ್ಧಾರವನ್ನು ಸ್ಥಳೀಯರು ಖಂಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಹನುಮ ಧ್ವಜ ಇಳಿಸದಂತೆ ಪಟ್ಟು ಹಿಡಿದಿದ್ದಾರೆ. ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನಾಕಾರರಿಂದ ಕೆರಗೋಡುವಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೋಸರು 144 ಸೆಕ್ಷನ್ ಜಾರಿ ಮಾಡಿದ್ದಾರೆ.
ಪ್ರತಿಭಟನಾಕಾರರ ಮನವೊಲಿಸಲು ಅಧಿಕಾರಿಗಳು ಯತ್ನಿಸಿದ್ದಾರೆ. ಪೊಲೀಸರ ಭದ್ರತೆ ನಡುವೆ ಎ.ಸಿ ಶಿವಮೂರ್ತಿ ಆಗಮಿಸಿದಾಗ ಅಧಿಕಾರಿಗಳ ಜೊತೆ ಗ್ರಾಮಸ್ಥರು ವಾಗ್ವಾದ ನಡೆಸಿದರು. ಯಾವುದೇ ಕಾರಣಕ್ಕೂ ಹನುಮ ಧ್ವಜ ಇಳಿಸಲು ಕೆರಗೋಡು ಗ್ರಾಮಸ್ಥರು ಒಪ್ಪಿಲ್ಲ. ಹನುಮ ಧ್ವಜ ತೆಗೆಯದಂತೆ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ. ಎಷ್ಟೇ ಮನವಿ ಮಾಡಿಕೊಂಡರು ಪೊಲೀಸರು ಧ್ವಜ ತೆಗೆಯಲು ಮುಂದಾಗಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಶಾಸಕ ರವಿ ಗಾಣಿಗ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿದ್ದಾರೆ. ಕೆರಗೋಡಿನಲ್ಲಿ ಪರಿಸ್ಥಿತಿ ಕೈ ಮೀರಿದಾಗ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿ ಬೀಸಿ ಧ್ವಜ ಕಂಬದಿಂದ ಗ್ರಾಮದಿಂದ ದೂರ ಓಡಿಸಿದ್ದು, ಧ್ವಜ ಕಂಬಕ್ಕೆ ಕಟ್ಟಿದ್ದ ಶ್ರೀರಾಮನ ಫ್ಲೆಕ್ಸ್ ತೆರವುಗೊಳಿಸಿದರು. ಪ್ರತಿಭಟನಾಕಾರರನ್ನು ಎಳೆದಾಕಿದ್ದರಿಂದ ಪೊಲೀಸರ ಜೊತೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ.