ಚಿತ್ರದುರ್ಗ | ನಾಳೆ ರಾಜ್ಯ ಮಟ್ಟದ ಶೋಷಿತರ ಜಾಗೃತಿ ಸಮಾವೇಶ | ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ : ಇಲ್ಲಿದೆ ಮಾಹಿತಿ…!

2 Min Read

 

ಚಿತ್ರದುರ್ಗ ಜ. 26  : ಇದೇ ಜ. 28 ರಂದು ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಪೀಠದ ಬಳಿಯ ಖಾಲಿ ಜಾಗದಲ್ಲಿ ರಾಜ್ಯ ಮಟ್ಟದ ಶೋಷಿತರ ಜಾಗೃತಿ ಸಮಾವೇಶ ನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸೇರಿದಂತೆ ವಿವಿಧ ಸಚಿವರುಗಳು ಪಾಲ್ಗೊಳ್ಳುವರು.  ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಅಂದು ಬೆ. 06 ರಿಂದ ಸಂಜೆ 06 ಗಂಟೆಯವರೆಗೆ ಚಿತ್ರದುರ್ಗ ನಗರಕ್ಕೆ ವಿವಿಧೆಡೆಯಿಂದ ಆಗಮಿಸುವ ಭಾರಿ ಹಾಗೂ ಲಘು ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಆದೇಶ ಹೊರಡಿಸಿದ್ದಾರೆ.

ಸಮಾವೇಶದಲ್ಲಿ ಪಾಲ್ಗೊಳ್ಳಲು ಜ. 28 ರಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ವಾಹನಗಳಲ್ಲಿ ಆಗಮಿಸುವ ನಿರೀಕ್ಷೆಯಿದ್ದು, ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿರುವುದರಿಂದ, ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ಕೆಲವು ಸಂಚಾರ ಮಾರ್ಗದ ಬದಲಾವಣೆ  ಮಾಡಲಾಗಿದೆ.

ದಾವಣಗೆರೆ ಮಾರ್ಗದಿಂದ ಬರುವ ವಾಹನಗಳು ಹೊಸ ಎನ್.ಹೆಚ್.-48 (ಬೈಪಾಸ್) ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ -13 ರ ಮೂಲಕ ಮುಂದುವರೆದು ಮದಕರಿಪುರ ಗ್ರಾಮದ ಬಳಿಯ ಸರ್ವಿಸ್ ರಸ್ತೆಯ ಮೂಲಕ ಇಳಿದು ಚಳ್ಳಕೆರೆ ರಸ್ತೆಯ ಮೂಲಕ ನಗರಕ್ಕೆ ಪ್ರವೇಶಿಸಬೇಕು.

ಹೊಸಪೇಟೆ ಮಾರ್ಗದಿಂದ (ಎನ್.ಹೆಚ್.-50) ಮೂಲಕ ಬರುವ ಪ್ರಯಾಣಿಕರ ವಾಹನಗಳು ಎನ್.ಹೆಚ್.-48 ರ ಬೈಪಾಸ್ ರಸ್ತೆ ಮುಖಾಂತರ ಮದಕರಿಪುರ ಗ್ರಾಮದ ಬಳಿಯ ರಸ್ತೆಯ ಮೂಲಕ ಇಳಿದು ಚಳ್ಳಕೆರೆ ರಸ್ತೆಯ ಮೂಲಕ ನಗರಕ್ಕೆ ಪ್ರವೇಶಿಸಬೇಕು.

ಶಿವಮೊಗ್ಗ ಹಾಗೂ ಭೀಮಸಮುದ್ರ ಮಾರ್ಗದಿಂದ ಬರುವ ವಾಹನಗಳು ಕಣಿವೆ ಕ್ರಾಸ್ ಮುಖಾಂತರ ನಗರಕ್ಕೆ ಪ್ರವೇಶಿಸಬೇಕು.

ಶಿವಮೊಗ್ಗ ಕಡೆಯಿಂದ ಚನ್ನಗಿರಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಸಂಚರಿಸುವ ಸರಕು ಸಾಗಣೆಯ ಭಾರಿ ವಾಹನಗಳು ಚನ್ನಗಿರಿ ಪಟ್ಟಣದಿಂದ ಸಂತೆಬೆನ್ನೂರು ಕ್ರಾಸ್ ಮುಖಾಂತರ ಸಂಚರಿಸಿ, ಸಂತೆಬೆನ್ನೂರು ಮಾರ್ಗವಾಗಿ ಎನ್.ಹೆಚ್.-48 ರಸ್ತೆ ಮುಖಾತರ ಸಂಚರಿಸಬೇಕು.

ಮುರುಘರಾಜೇಂದ್ರ ಬೃಹನ್ಮಠದ ಮುಂಭಾಗದಿಂದ ಸೀಬಾರ ಅಂಡರ್‍ಪಾಸ್ ವರೆಗಿನ ಎನ್.ಹೆಚ್.-48 ರಸ್ತೆಯಲ್ಲಿ ಎಲ್ಲಾ ಬಗೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಆದೇಶದಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *