ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಡಿಸಿದ ಪಟಾಕಿಗಳಿಂದ ವಾಯು ಮಾಲಿನ್ಯ ತೀವ್ರವಾಗಿ ಹೆಚ್ಚಿದೆ. ದೆಹಲಿಯಲ್ಲಿ ಪಟಾಕಿ ನಿಷೇಧವಿದ್ದರೂ ಜನರು ನಿಯಮ ಪಾಲಿಸದೆ ನಿರ್ಲಕ್ಷಿಸಿದ್ದಾರೆ. ಇದರಿಂದಾಗಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಸಂಶೋಧನಾ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ದೆಹಲಿ ವಿಶ್ವವಿದ್ಯಾಲಯ, ಪಿಯುಎಸ್ ಎ, ಲೋಧಿ ರಸ್ತೆ, ಮಥುರಾ ರಸ್ತೆ, ಐಐಟಿ ದೆಹಲಿ, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಟರ್ಮಿನಲ್ 3)
ಸೇರಿದಂತೆ ದೇಶದ ರಾಜಧಾನಿಯ ಹಲವು ಭಾಗಗಳಲ್ಲಿ ಶುಕ್ರವಾರ ಬೆಳಿಗಿ್ಗೆ ಗಾಳಿಯ ಗುಣಮಟ್ಟ 396, 376, 379, 398, 395, 387 ದಾಖಲಾಗಿದೆ. ಆದರೆ, ಇನ್ನೆರಡು ದಿನಗಳಲ್ಲಿ ಗಾಳಿಯ ಗುಣಮಟ್ಟ ಸಹಜ ಸ್ಥಿತಿಗೆ ಮರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಏಜೆನ್ಸಿಗಳ ಪ್ರಕಾರ, ಗಾಳಿಯ ಗುಣಮಟ್ಟ ಸೂಚ್ಯಂಕವು 0 ಯಿಂದ 5 ರ ನಡುವೆ ಇದ್ದರೆ, ಗಾಳಿಯ ಗುಣಮಟ್ಟ ಉತ್ತಮ, 51-100 ರಷ್ಟಿದ್ದರೆ ಮಧ್ಯಮ ಶ್ರೇಣಿ, 101-200 ಕಳಪೆ, 301-400 ಕೆಟ್ಟದಾಗಿ, ಮತ್ತು 401-500 ನಡುವೆ ಇದ್ದರೆ ಅಪಾಯಕಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.