ಬೆಂಗಳೂರು: ಇಂದು ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಜಗದೀಶ್ ಶೆಟ್ಟರ್ ಇದ್ದಕ್ಕಿದ್ದ ಹಾಗೇ ಬಿಜೆಪಿ ಪಕ್ಷಕ್ಕೆ ಮರಳಿ ಹೋಗಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಶಾಕಿಂಗ್ ವಿಚಾರ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನನಗೆ ಇನ್ನೂ ರಾಜೀನಾಮೆ ಪತ್ರ ತಲುಪಿಲ್ಲ. ಕಾಂಗ್ರೆಸ್ ಪಕ್ಷ ಮರುಜೀವ ಕೊಟ್ಟಿದೆ ಎಂದು ಹೇಳುತ್ತಿದ್ದರು. ಯಾವತ್ತಿಗೂ ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದರು. ಬಿಜೆಪಿ ವಿರುದ್ಧ ಬಹಳಷ್ಟು ಹೇಳಿಕೆಗಳನ್ನು ನೀಡಿದ್ದರು. ಹೇಗೆಲ್ಲಾ ದುರುಪಯೋಗ ಪಡಿಸಿಕೊಂಡಿದ್ದಾರೆಂಬುದನ್ನು ತಿಳಿಸಿದ್ದರು. ಚುನಾವಣೆಯಲ್ಲಿ 35 ಸಾವಿರ ಮತಗಳ ಅಂತರದಿಂದ ಸೋತಾಗಲೂ ಅವರನ್ನು ಪಕ್ಷ ಗೌರವಿಸಿದೆ. ಎಂಎಲ್ಸಿ ಮಾಡಿದ್ದೇವೆ. ಬಿಜೆಪಿ ಪಕ್ಷಕ್ಕೆ ಮತ್ತೆ ಹೋಗಿದ್ದು ಒತ್ತಡದಿಂದಾನಾ ಗೊತ್ತಿಲ್ಲ. ಯಾಕೆ ಅಂದು ಟಿಕೆಟ್ ಕೈತಪ್ಪಿದಾಗ ದೇಶದ ಹಿತ ನೆನಪಾಗಲಿಲ್ಲವಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಮಾತನಾಡಿ, ನಿನ್ನೆ ಬೆಳಗ್ಗೆ ಕೂಡ ಅವರ ಜೊತೆಗೆ ಮಾತನಾಡಿದ್ದೆ. ಆದರೆ ದೆಹಲಿಯಲ್ಲಿ ಏನು ಮಾಡಿದ್ದಾರೋ ಗೊತ್ತಿಲ್ಲ. ಬಿಜೆಪಿಯವರು ಅವರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಬಿಜೆಪಿಯಲ್ಲಿ ಅವಮಾನ ಆಗಿದೆ ಎಂದು ಕಾಂಗ್ರೆಸ್ ಗೆ ಬಂದರು. ಇಲ್ಲಿ ಅವರನ್ನು ಎಂಎಲ್ಸಿ ಮಾಡಿದೆವು. ಏನು ನಿರ್ಧಾರ ಮಾಡಿದ್ದಾರೆಂಬುದು ಗೊತ್ತಿಲ್ಲ. ನೋಡಿ ಹೇಳುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಜಗದೀಶ್ ಶೆಟ್ಟರ್ ತೊರೆಯುತ್ತಾರೆ ಎಂಬ ಅಭಿಪ್ರಾಯಗಳು ಕೇಳಿ ಬಂದಾಗಲೂ, ಯಾವುದೇ ಕಾರಣಕ್ಕೂ ವಾಪಾಸ್ ಬಿಜೆಪಿಗೆ ಹೋಗಲ್ಲ ಎಂದೇ ಜಗದೀಶ್ ಶೆಟ್ಟರ್ ಗಟ್ಟಿಯಾಗಿ ಹೇಳುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಬಿಜೆಪಿಗೆ ಮರು ಸೇರ್ಪಡೆಯಾಗಿ, ಶಾಕ್ ನೀಡಿದ್ದಾರೆ.