ಮಂಗಳೂರು : ದ.ಕ: ಲೋಕಸಭಾ ಚುನಾವಣೆಗೆ ತಯಾರಿ ನಡೆಯುತ್ತಿದ್ದು, ಗೆಲ್ಲುವ ಕುದುರೆ ಯಾರು ಎಂಬ ಲೆಕ್ಕಚಾರವೂ ಹೈಕಮಾಂಡ್ ಅಂಗಳದಲ್ಲಿ ನಡೆಯುತ್ತಿದೆ. ಇತ್ತ ಕ್ಷೇತ್ರಗಳಲ್ಲೂ ಹೊಸಬರು, ಹಳಬರಿಗೆ ಟಿಕೆಟ್ ನಿರೀಕ್ಷೆ ಹೆಚ್ಚಾಗಿದೆ. ಇದರ ನಡುವೆ ದಕ್ಷಿಣ ಕನ್ನಡದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ನಳಿನ್ ಕುಮಾರ್ ಕಟೀಲ್ ಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಸಂಘಟನೆಯ ಕಾರ್ಯಕರ್ತರು ಕಟೀಲ್ ಮೇಲೆ ಒಲವು ತೋರುತ್ತಿಲ್ಲ. ಆದರೆ ಬಿ ಎಲ್ ಸಂತೋಷ್ ಅವರು ಮಾತ್ರ ಕಟೀಲು ಅವರ ಬೆಂಬಲಕ್ಕೆ ನಿಂತಿದ್ದಾರೆ.
ಕರಾವಳಿ ಬಿಜೆಪಿಯ ಭದ್ರಕೋಟೆ. ಯಾರೇ ನಿಂತರು ಗೆಲ್ಲುತ್ತಾರೆ ಎಂಬ ವಿಶ್ವಾಸ ಬಿಜೆಪಿಗೆ ಇದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯ ಬದಲಾವಣೆ ಬಗ್ಗೆ ಚಿಂತಿಸುತ್ತಿದೆ ಎನ್ನಲಾಗುತ್ತಿದೆ. ಈ ಮೂಲಕ ನಳೀನ್ ಕುಮಾರ್ ಅವರ ಹ್ಯಾಟ್ರಿಕ್ ಕನಸಿಗೆ ನೀರೆರೆಚಿದಂತೆ ಆಗಿದೆ. ಇನ್ನು ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರ್ ಎಸ್ ಎಸ್ ಹಿನ್ನೆಲೆಯುಳ್ಳ ಚೌಟ ಅವರು ಯಡಿಯೂರಪ್ಪ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಸಂಘ ಪರಿವಾರದ ರಾಷ್ಟ್ರೀಯ ಪ್ರಮುಖರೊಂದಿಗೆ ನಿಖಟ ಸಂಪರ್ಕವನ್ನು ಹೊಂದಿದ್ದಾರೆ. ಲೋಕಸಭಾ ಚುನಾವಣೆಯ ಪ್ರಬಲ ಆಕಾಂಕ್ಷಿ ಕೂಡ ಆಗಿದ್ದಾರೆ. ನಳೀನ್ ಕುಮಾರ್ ಕಟೀಲು ಅವರಿಗೆ ಸಂಘಟನೆಯವರ ವಿರೋಧ, ಕಾರ್ಯಕರ್ತರ ವಿರೋಧ ಇರುವ ಕಾರಣ ಅದೆಲ್ಲವನ್ನು ವಿರೋಧಿಸಿ ಟಿಕೆಟ್ ನೀಡುವುದು ಅನುಮಾನವಾಗಿದೆ. ಹೀಗಾಗಿ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಬಹುದಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.