ಸುದ್ದಿಒನ್, ಹಿರಿಯೂರು, ಜನವರಿ.24 : ತಾಲೂಕಿನ ಧರ್ಮಪುರ ಹೋಬಳಿ ವ್ಯಾಪ್ತಿಯಲ್ಲಿನ ಬೆನಕನಹಳ್ಳಿ ಗ್ರಾಮದಲ್ಲಿ ಹಾವು ಕಚ್ಚಿದ ಪರಿಣಾಮ 5ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಮೃತಪಟ್ಟಿರುವ ದುರಂತ ಘಟನೆ ಬುಧವಾರ ನಡೆದಿದೆ.
ಬೆನಕನಹಳ್ಳಿ ಗ್ರಾಮದ ಶಶಾಂಕ್(11) ಮೃತ ವಿದ್ಯಾರ್ಥಿ. ಈತ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಈತನು ಮಂಗಳವಾರ ರಾತ್ರಿ ತನ್ನ ತಂದೆಯ ಜತೆಗೆ ಜಮೀನಿಗೆ ನೀರು ಹಾಯಿಸಲು ಹೋಗಿದ್ದಾನೆ. ನೀರು ಬಿಟ್ಟು ಜಮೀನಿನ ಬದುವಿನಲ್ಲಿ ಮಲಗಿದ್ದಾಗ ನಾಗರಹಾವು ಕಚ್ಚಿದ್ದು, ತಕ್ಷಣವೇ ಧರ್ಮಪುರ ಸಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು, ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಧರ್ಮಪುರ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಬಾಲಕ ಮೃತಪಟ್ಟಿದ್ದಾನೆಂದು ಆರೋಪಿಸಿ ಮೃತನ ಸಂಬಂಧಿಕರು ಧರ್ಮಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಲ್ಲಿ ಬಾಲಕನ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನಾ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅಬ್ಬಿನಹೊಳೆ ಪೊಲೀಸರು ಭೇಟಿ ನೀಡಿ, ಪ್ರತಿಭಟನಾಕಾರರನ್ನು ಮನವೊಲಿಸಿ ಪ್ರತಿಭಟನೆ ಕೊನೆಗೊಳಿಸಿದ್ದಾರೆ.
ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .