ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.24 : ಚಿತ್ರದುರ್ಗದಲ್ಲಿ
ಇಲ್ಲಿಯವರೆಗೂ ಹೊರಗಿನವರೆ ಬಂದು ಗೆದ್ದುಕೊಂಡು ಪಾರ್ಲಿಮೆಂಟ್‍ಗೆ ಪ್ರವೇಶಿಸುತ್ತಿದ್ದಾರೆ. ಈ ಬಾರಿ ಅದಕ್ಕೆ ಅವಕಾಶ ನೀಡುವುದು ಬೇಡ. ಚಿತ್ರದುರ್ಗ ಜಿಲ್ಲೆ ಸಮಗ್ರವಾಗಿ ಅಭಿವೃದ್ದಿಯಾಗಬೇಕಾಗಿರುವುದರಿಂದ ಸ್ಥಳೀಯರಾದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿಯವರಿಗೆ ಕಾಂಗ್ರೆಸ್ ಟಿಕೇಟ್ ನೀಡುವಂತೆ ಎಲ್ಲಾ ಕಡೆ ಕೂಗು ಕೇಳಿ ಬರುತ್ತಿದೆ. ಚುನಾವಣೆ ಬಂದಾಗ ಮಾತ್ರ ಹೊರಗಿನವರು ಇಲ್ಲಿಗೆ ಬಂದು ಮತ ಪಡೆದು ಪಾರ್ಲಿಮೆಂಟ್ ಸದಸ್ಯರುಗಳಾಗುತ್ತಿದ್ದಾರೆ. ಇಂತಹ ಪರಿಪಾಠ ನಿಲ್ಲಬೇಕು. ಅದಕ್ಕಾಗಿ ಡಾ.ಬಿ.ತಿಪ್ಪೇಸ್ವಾಮಿರವರಿಗೆ ಬೆಂಬಲವಾಗಿ ನಿಲ್ಲೋಣ ಎಂದು ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್ ಹೇಳಿದರು.
ಕಾಂಗ್ರೆಸ್ ಮುಖಂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿಯವರ
ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದಿದ್ದ ಸಭೆಯಲ್ಲಿ
ಭಾಗವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರು ಡಾ.ಬಿ.ತಿಪ್ಪೇಸ್ವಾಮಿರವರ ಪರವಾಗಿರುವ ವಿಚಾರ ಪಕ್ಷದ ಹೈಕಮಾಂಡ್‍ಗೆ ಮುಟ್ಟಿದೆ. ಟಿಕೇಟ್ ಸಿಗುವ ವಿಶ್ವಾಸವಿದೆ. ಭದ್ರಾಮೇಲ್ದಂಡೆ ಯೋಜನೆ, ನೇರ ರೈಲು ಮಾರ್ಗ ಸೇರಿದಂತೆ ಅನೇಕ ಸಮಸ್ಯೆಗಳು ಜಿಲ್ಲೆಯಲ್ಲಿವೆ. ಕೈಗಾರಿಕೆಗಳ ಸ್ಥಾಪನೆಯಾಗಿ ನಿರುದ್ಯೋಗಿಗಳ ಕೈಗೆ ಕೆಲಸ ಸಿಗಬೇಕು. ಇವೆಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಡಾ.ಬಿ.ತಿಪ್ಪೇಸ್ವಾಮಿಗೆ ಪಕ್ಷ ಟಿಕೇಟ್ ನೀಡಬೇಕೆಂಬುದು ಎಲ್ಲಾ ಜಾತಿ ವರ್ಗದವರ ಒತ್ತಾಯ ಹಾಗೂ ಬೆಂಬಲವಿದೆ ಎಂದು ಹೇಳಿದರು.
ಚಿಕ್ಕಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ ಜಿಲ್ಲೆಯಾದ್ಯಂತ ಪ್ರತಿ ತಾಲ್ಲೂಕಿನಲ್ಲಿ ಬೈಕ್‍ರ್ಯಾಲಿ, ಪಾದಯಾತ್ರೆ ನಡೆಸಿ ಸ್ಥಳೀಯರಾದ ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿಗೆ ಟಿಕೇಟ್ ನೀಡುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಬೇಕಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಸ್ಥಳೀಯರಿಗೆ ಟಿಕೇಟ್ ಸಿಗಬೇಕೆಂಬ ನಮ್ಮ ಬೇಡಿಕೆ ಹೈಕಮಾಂಡ್‍ಗೆ ಮುಟ್ಟುವ ರೀತಿಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್, ತುರುವನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಡಿ.ಆರ್.ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಮಂಜುನಾಥ್, ಕಿರಣ್‍ಯಾದವ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಿರೇಗುಂಟನೂರು ಶಿವಣ್ಣ, ರಾಜುಯಾದವ್, ರಾಜಶೇಖರ್, ಮಲ್ಲೇಶ್, ಬಿ.ರಾಜಣ್ಣ ಇನ್ನು ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.