ಚಿತ್ರದುರ್ಗ.ಜ.24 : ಹೆಣ್ಣು ಮಕ್ಕಳು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕಿ, ನರ್ಸ್, ಬಸ್ ಕಂಡಕ್ಟರ್, ಪೊಲೀಸ್, ವಿಜ್ಞಾನಿ, ಪೈಲೆಟ್, ಕೈಗಾರಿಕೋಧ್ಯಮಿ, ಆಡಳಿತ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ಮೂಲಕ ಮುಂಚೂಣಿಯಲ್ಲಿ ಇದ್ದಾರೆ. ಇದರೊಂದಿಗೆ ದೇಶದ ರಕ್ಷಣೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ರಂಗದಲ್ಲೂ ಹೆಣ್ಣು ಮಕ್ಕಳ ಸಾಧನೆ ಅಪಾರವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಹೇಳಿದರು.
ನಗರದ ಶ್ರೀ ಕಬೀರಾನಂದಾಶ್ರಮದಲ್ಲಿ ಬುಧವಾರ ಆಯೋಜಿಸಲಾದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಸುಕನ್ಯಾ ಸಮೃದ್ದಿ ಯೋಜನೆ ಪಾಸ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರ ಕಾರ್ಯವ್ಯಾಪ್ತಿ ಇಲ್ಲದೇ ಇರುವ ಯಾವುದೇ ಕ್ಷೇತ್ರಗಳು ನಮ್ಮ ದೇಶದಲ್ಲಿ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಪಾತ್ರವಿದೆ. ಪ್ರತಿಯೊಬ್ಬರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಸಮಾಜದಲ್ಲಿ ಎಲ್ಲರೆದುರು ಸಮಾನವಾಗಿ ನಿಲ್ಲುವಂತೆ ಮಾಡಬೇಕು. ಸಮಾಜದಲ್ಲಿ ಗೌರವಯುತವಾಗಿ ಬದುಕಲು ದೌರ್ಜನ್ಯದ ವಿರುದ್ಧ ಧ್ವನಿಯೆತ್ತಲು ಶಕ್ತಿ ನೀಡಬೇಕು. ಮಾನಸಿಕವಾಗಿ ಸದೃಢರಾಗಿ ಇರುವಂತೆ ಹೆಣ್ಣುಮಕ್ಕಳನ್ನು ಬೆಳೆಸಬೇಕು ಎಂದರು.
ಈ ಹಿಂದೆ ಮಹಿಳೆಯರನ್ನು ಅಬಲೆಯಾಗಿ ನೋಡುತ್ತಿದ್ದರು. ಮಹಿಳೆಗೆ ಪುರುಷನೊಬ್ಬ ಆಧಾರವಾಗಿ ಇರಬೇಕು ಎಂದು ಬಾವಿಸಿದ್ದರು. ಆದರೆ ಈಗಿನ ಸಮಾಜ ಬದಲಾಗಿದೆ. ಮನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ತಂದೆ, ಮಗಳನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಿ ಮದುವೆ ಮಾಡುವುದು ಹೇಗೆ ಎಂದು ಚಿಂತಿಸುತ್ತಿದ್ದರು. ಈಗ ಹೆಣ್ಣುಮಕ್ಕಳು ಹುಟ್ಟದಿದ್ದರೆ ಕೊನೆಗಾಲದಲ್ಲಿ ನಮ್ಮನ್ನು ನೋಡಿಕೊಳ್ಳುವ ಮಹಾಲಕ್ಷ್ಮೀ ಹುಟ್ಟಲಿಲ್ಲ ಎಂದು ಚಿಂತಿಸುವಂತಾಗಿದೆ. ಭಾರತೀಯ ಸಂಸ್ಕøತಿಯಲ್ಲಿ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಲಾಗಿದೆ. ಜಗತ್ತು ರಕ್ಷಿಸುವ ಆದಿಶಕ್ತಿಯಾಗಿ ಹೆಣ್ಣನ್ನು ಬಿಂಬಿಸಲಾಗಿದೆ. ಜಗತ್ತಿಗೆ ಸಂಕಟ ಬಂದಾಗ ಆದಿಶಕ್ತಿ ಕಾಪಾಡುತ್ತಾಳೆ ಎನ್ನುವ ಭಕ್ತಿ ನಮ್ಮಲ್ಲಿದೆ. ಹೆಣ್ಣು ಮಕ್ಕಳು ಅಬಲೆಯರಲ್ಲ ಎಂದು ತಿಳಿಸಿದ ಅವರು, ಚಿತ್ರದುರ್ಗವನ್ನು ಶತ್ರಗಳಿಂದ ರಕ್ಷಿಸಿದವಳು ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ದ ಹೋರಾಡಿದರು. ಇಡೀ ಸಾಮ್ರಾಜ್ಯವನ್ನು ರಕ್ಷಿಸಿ ಆಳುವ ಶಕ್ತಿ ಹೆಣ್ಣಿನಲ್ಲಿದೆ ಎಂಬುದು ಈ ಅಂಶಗಳಿಂದ ತಿಳಿದು ಬರುತ್ತದೆ ಎಂದು ಕೆ.ಎಸ್.ನವೀನ್ ಹೇಳಿದರು.
ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ನಮಗೆ ಭಾರವಲ್ಲ. ನಮಗೆ ಮಾರ್ಗದರ್ಶಕರು, ದೇಶದ ಕಣ್ಣು ಎಂದರೆ ಹೆಣ್ಣುಮಕ್ಕಳು. ದೇಶದ ಎಲ್ಲಾ ಪ್ರಮುಖ ನದಿಗಳಿಗೆ ಹೆಣ್ಣು ಮಕ್ಕಳ ಹೆಸರು ಇಟ್ಟಿದ್ದಾರೆ. ನೀರು ಇಲ್ಲದೆ ಹೋದರೆ ಜೀವ ಇಲ್ಲ. ಹಾಗೇ ಹೆಣ್ಣು ಮಕ್ಕಳು ಇಲ್ಲದೇ ಮಾನವ ಸಮಾಜಕ್ಕೆ ಅಸ್ತಿತ್ವವೇ ಇಲ್ಲ. ಮಮತೆ, ಕರುಣೆ ಹಾಗೂ ಪ್ರೀತಿಯಿಂದ ಹೆಣ್ಣುಮಕ್ಕಳು ಬೆಳಸಿದರೆ ಅವರು ಸಮಾಜ ಕಣ್ಣಾಗುತ್ತಾರೆ. ಇಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳು ಸಾಕಷ್ಟು ಜಾಗೃತರಾಗಿದ್ದಾರೆ. ಇದಕ್ಕೆ ಕಾರಣ ಹೆಣ್ಣು ಮಕ್ಕಳ ಶಿಕ್ಷಣ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಮನೆಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಸಮಾನ ರೀತಿಯಲ್ಲಿ ಬೆಳೆಸಬೇಕು. ಶಿಕ್ಷಣ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಹೆಣ್ಣು ಮಕ್ಕಳಿಗೆ ನೀಡಿದರೆ, ಅವರೂ ಸಹ ಉತ್ತಮ ಸಾಧನೆ ತೋರುತ್ತಾರೆ ಎಂದರು.
ಮಕ್ಕಳಿಗೆ ಸನ್ಮಾನ : ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧರಣ ಸಾಧನೆ ಮಾಡಿದ ಮಕ್ಕಳು ಸನ್ಮಾನಿಸಲಾಯಿತು.
ತಾರ್ಕಿಕ ಸಾಧನೆಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಚಿತ್ರದುರ್ಗದ ಹೆಚ್.ಎಸ್.ಜಯಂತ್, ಪೃಥ್ವಿ ಕೆ.ಸಿ, ನ್ಯಾವಿನ್ಯತಾ ವಿಭಾಗದಲ್ಲಿ ಹಿರಿಯೂರಿನ 10ನೇ ತರಗತಿ ವಿದ್ಯಾರ್ಥಿನಿ ರಮ್ಯಾ.ಜಿ.ಆರ್, ಚಿತ್ರದುರ್ಗದ ಪ್ರಥಮ ಪಿ.ಯು. ವಿದ್ಯಾರ್ಥಿ ಮೊಹಮ್ಮದ್ ಸಫ್ವಾನ್ ಖಾನ್, ಕಲೆ ಸಾಂಸ್ಕøತಿಕ ಮತ್ತು ಸಂಗೀತ ವಿಭಾಗದಲ್ಲಿ ಚಿತ್ರದುರ್ಗದ ದ್ವಿತೀಯ ಪಿ.ಯು. ವಿದ್ಯಾರ್ಥಿನಿ ಸಿಂಧು.ಎಸ್.ಬಿ, 9ನೇ ತರಗತಿ ವಿದ್ಯಾರ್ಥಿ ಕೆ.ಪಿ.ಎಂ.ಗುರುದೇವ, ಕ್ರೀಡಾ ವಿಭಾಗದಲ್ಲಿ ಚಿತ್ರದುರ್ಗದ 9ನೇ ತರಗತಿ ವಿದ್ಯಾರ್ಥಿನಿ ಪದ್ಮಾವತಿ.ಪಿ, ದ್ವಿತೀಯ ಪಿ.ಯು. ವಿದ್ಯಾರ್ಥಿ ಲವ.ಟಿ.ವಡಕಲ್ ಅವರನ್ನು ತಲಾ ರೂ.10 ಸಾವಿರ ನಗದು ಪುರಸ್ಕಾರ ದೊರಕಿದೆ.
2022-23ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿನಿಯರಾದ ಹಿರಿಯೂರು ತಾಲ್ಲೂಕಿನ ದಯಾನಿಧಿ.ಎಸ್.ಪಿ, ಚಳ್ಳಕೆರೆ ತಾಲ್ಲೂಕಿನ ಸಾಯಿ ಸಂಕೀರ್ತನಾ.ಎಸ್, ಹೊಳಲ್ಕೆರೆ ತಾಲ್ಲೂಕಿನ ರಕ್ಷಾ ಟಿ.ಬೆಲಗೂರ್, ಚಿತ್ರದುರ್ಗ ತಾಲ್ಲೂಕಿನ ಸಹನಾ.ಜಿ, ಮೊಳಕಾಲ್ಮೂರು ತಾಲ್ಲೂಕಿನ ಉಷಾ.ಎನ್ ಅವರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಸುಕನ್ಯಾ ಸಮೃದ್ದಿ ಯೋಜನೆಯ ಫಲಾನುಭವಿಗಳಿಗೆ ಅಂಚೆ ಪಾಸ್ ಬುಕ್ ಹಾಗೂ ಯೋಜನೆ ಮಂಜೂರಾತಿ ಪತ್ರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಾಲ ನ್ಯಾಯ ಮಂಡಳಿ ಸದಸ್ಯೆ ಸುಮನ ಎಸ್.ಅಂಗಡಿ ವಿಶೇಷ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಸ್ವಾಗತಿಸಿದರು.
ಕಾರ್ಯಕ್ರದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಪವಿತ್ರಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ, ಶಿಶು ಅಭಿವೃದ್ಧಿ ಅಧಿಕಾರಿಗಳಾದ ಎನ್.ಸುಧಾ, ವಿ.ಮಂಜುಳ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.