ವರದಿ ಮತ್ತು ಫೋಟೋ ಕೃಪೆ, ಸುರೇಶ್ ಪಟ್ಟಣ್, ಮೊ : 98862 95817
ಸುದ್ದಿಒನ್, ಚಿತ್ರದುರ್ಗ,ಜ.24 : ಸಹಕಾರಿ ಬ್ಯಾಂಕ್ ಗಳಿಗೆ 439 ಕೋಟಿ ರೂ.ಗಳನ್ನು ವಂಚನೆ ಮಾಡಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ವ್ಯಕ್ತಿಗಳು ಸಹಕಾರಿ ಬ್ಯಾಂಕ್‍ಗಳನ್ನು ತಮ ಹಿಡಿತದಲ್ಲಿಟ್ಟುಕೊಂಡು ತಮಗೆ ಮನ ಬಂದಂತೆ ಬಳಸಿಕೊಳ್ಳುತ್ತಿದ್ದಾರೆ. ಇದು ಸಾಕಷ್ಟು ಹಣ ದುರ್ಬಳಕೆಗೆ ನಿರ್ಭಿತವಾದ ದಾರಿಯಾಗಿದ್ದು, ರಾಜಕೀಯ ವ್ಯಕ್ತಿಗಳ ಹಿಡಿತದಿಂದ ತಪ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಶಾಸಕ ರಮೇಶ ಜಾರಕಿಹೊಳಿ ಸಹಕಾರಿ ಬ್ಯಾಂಕ್ ಗೆ 439 ಕೋಟಿ ರೂ ವಂಚನೆ ಮಾಡಿರುವುದರಿಂದ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಸಹಕಾರಿ ಬ್ಯಾಂಕ್‍ಗಳು ರಾಜಕೀಯ ವ್ಯಕ್ತಿಗಳ ಕೈಗೆ ಸಿಕ್ಕು ನಷ್ಟವನ್ನು ಅನುಭವಿಸುತ್ತಿವೆ. ಅವರ ಹಿಡಿತದಿಂದ ತಪ್ಪಿಸಬೇಕಾಗಿದ್ದು, ಮೋಸ ಮಾಡುವಂತಹ ವ್ಯಕ್ತಿಗಳಿಗೆ ರಾಜಕೀಯ ಮಾನ್ಯತೆ ಯಾವುದೇ ಕಾರಣಕ್ಕೂ ನೀಡಬಾರದು ಎಂದು ಆಗ್ರಹಿಸಿದರು.
ಸಂವಿಧಾನದ ಮೊದಲ ಆಶಯ ನಿಂತಿರುವುದು ಮಹಾಭಾರತ, ರಾಮಾಯಣದ ಮೇಲೆ. ಇಂತಹ ಮಹಾನ್ ಗ್ರಂಥಗಳನ್ನು ನಂಬಿ ರಾಜಕೀಯ ಮಾಡುತ್ತಿರುವ ಬಿಜೆಪಿ ಪಕ್ಷದವರು, ತನ್ನ ಸಿದ್ದಾಂತಕ್ಕೆ ಬೆಲೆ ಕೊಡುವುದೇ ಆದರೆ ಮೋಸ ಮಾಡಿರುವ ವ್ಯಕ್ತಿಗಳಿಗೆ ಪಕ್ಷದಲ್ಲಿ ಮಾನ್ಯತೆ ಕೊಡಬಾರದು ಎಂದು ಒತ್ತಾಯಿಸಿದರು.
ಮಹಾತ್ಮ ಗಾಂಧಿಜೀ, ಅಂಬೇಡ್ಕರ್ ರವರ ರಾಮರಾಜ್ಯದ ಚಿಂತನೆ ಕಡೆಗೆ ನಾವುಗಳು ಸಾಗುತ್ತಿರುವ ಈ ಸಂದರ್ಭದಲ್ಲಿ ಲೂಟಿಕೋರರಿಂದ ದೇಶವನ್ನು ರಕ್ಷಣೆ ಮಾಡಬೇಕಾಗಿದ ಅವಶ್ಯಕತೆ ಹೆಚ್ಚಾಗಿದ್ದು ಎಲ್ಲಾರೂ ಈ ನಿಟ್ಟಿನಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ರವಿಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ, ತನ್ವೀರ್, ಲಿಂಗರಾಜು ಉಪಸ್ಥಿತರಿದ್ದರು.