ಸಾಣೇಹಳ್ಳಿಯಲ್ಲಿ ಫೆಬ್ರವರಿ 2, 3 ರಂದು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

2 Min Read

 

ಸುದ್ದಿಒನ್, ಚಿತ್ರದುರ್ಗ, ಜನವರಿ. 24 : ಸಾಣೇಹಳ್ಳಿಯಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸರ್ವಾಧ್ಯಕ್ಷತೆಯಲ್ಲಿ  2024 ಫೆಬ್ರವರಿ 2, 3 ರಂದು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಿದೆ.

ಚಿತ್ರದುರ್ಗ ಮತ್ತು ಚಿಕ್ಕಮಗಳೂರಿನ ಪ್ರಥಮ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 2023 ಡಿಸೆಂಬರ್ 30-31 ರಂದು ನಡೆಯಬೇಕಿತ್ತು. ಕಾರಣಾಂತರಗಳಿಂದ ಅದನ್ನು ಮುಂದೂಡಲಾಗಿತ್ತು. ಸಮಿತಿಯ ಪದಾಧಿಕಾರಿಗಳು ಚರ್ಚಿಸಿ 2024 ಫೆಬ್ರವರಿ 02ರ ಶುಕ್ರವಾರ ಮತ್ತು 03 ಶನಿವಾರ ನಡೆಸಲು ನಿರ್ಣಯಿಸಲಾಗಿದೆ. 02 ರ ಬೆಳಗ್ಗೆ 09 ಗಂಟೆಯಿಂದ ಪ್ರಾರಂಭವಾಗುವ ಸಮ್ಮೇಳನವು 03 ರ ರಾತ್ರಿ 09 ರವರೆಗೆ ನಿರಂತರವಾಗಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಲಿವೆ.

ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾಗಿರುವ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಪೂಜ್ಯರ ಸಾಹಿತ್ಯ ಸೇವೆ ಅಪಾರ. ಅವರಿಂದ 06 ನಾಟಕಗಳು, 02 ಸ್ವತಂತ್ರ ವಚನ ಸಂಗ್ರಹ, 52 ವೈಚಾರಿಕ ಪ್ರಬಂಧ ಕೃತಿಗಳು, 01 ಪ್ರವಾಸ ಕಥನ, 65 ಸಂಪಾದನಾ ಕೃತಿಗಳು  ಒಟ್ಟು 126 ಕೃತಿಗಳು ಕನ್ನಡ ಸಾಹಿತ್ಯ  ಭಂಡಾರವನ್ನು ಸೇರಿ ಶ್ರೀಮಂತಗೊಳಿಸಿವೆ.

ಸಮ್ಮೇಳನದಲ್ಲಿ ಸಾಂಸ್ಕೃತಿಕ ರಾಜಕಾರಣ, ರಂಗಭೂಮಿ, ಮಠಗಳ ಕೊಡುಗೆ, ಉಭಯ ಜಿಲ್ಲೆಗಳ ಇತಿಹಾಸ-ಸಾಹಿತ್ಯ, ಕವಿಗೋಷ್ಠಿ ಹೀಗೆ ವಿಭಿನ್ನ ಗೋಷ್ಠಿಗಳು ನಡೆಯಲಿವೆ. ಸಾಂಸ್ಕೃತಿಕ ಸಂಜೆಯಲ್ಲಿ ಎರಡೂ ಜಿಲ್ಲೆಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾದರಗೊಳ್ಳಲಿವೆ. ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಕೃತಿಗಳು ಬಿಡುಗಡೆಗೊಳ್ಳಲಿವೆ. ರಾಜ್ಯದ ಪ್ರಸಿದ್ಧ ವಿದ್ವಾಂಸರು, ಸಂಶೋಧಕರು, ಕವಿಗಳು ಭಾಗವಹಿಸುವರು. ಎರಡು ಜಿಲ್ಲೆಗಳ ಭಾರತದ ಸರಕಾರದ ಸಚಿವರುಗಳು, ರಾಜ್ಯದ ಸಚಿವರುಗಳು,  ವಿಧಾನಸಭಾ, ವಿಧಾನಪರಿಷತ್ ಸದಸ್ಯರುಗಳು ಹಾಗೂ ಅಧಿಕಾರಿ ವರ್ಗದವರು ಭಾಗವಹಿಸುವರು.

ಸಾಣೇಹಳ್ಳಿಯ ಗ್ರೀಕ್ ಮಾದರಿಯ ಶಿವಕುಮಾರ ಬಯಲು ರಂಗಮಂದಿರ ಮತ್ತು ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ಎರಡು ದಿನದ ಸಮ್ಮೇಳನದ ಕಾರ್ಯಕ್ರಮಗಳು ಜರುಗಲಿವೆ.

ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸಮ್ಮೇಳನದಲ್ಲಿ ಭಾಗವಹಿಸುವವರು ಮೊದಲೇ ನೋಂದಣಿ ಮಾಡಿಸಲು ಅವಕಾಶವಿದೆ.

ಅಂಥವರು ಕಸಾಪ ಜಿಲ್ಲಾ ಗೌ.ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ – ದೂ: 9448664878,   ವಿ.ಶ್ರೀನಿವಾಸ ಮಳಲಿ – ದೂ: 9449759219  ಅಥವಾ ನಿಮ್ಮ ನಿಮ್ಮ ತಾಲ್ಲೂಕಿನ  ಕಸಾಪ ಅಧ್ಯಕ್ಷರ ಮೂಲಕವೂ ನೋಂದಣಿ ಮಾಡಿಸಬಹುದು. ಪ್ರತಿನಿಧಿ ಶುಲ್ಕ 300 ರೂ ಆಗಿರುತ್ತದೆ. ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಾಡುವವರಿಗೆ ಮಳಿಗೆಗಳು ಲಭ್ಯವಿರುತ್ತವೆ. ಅವಶ್ಯಕವಿರುವವರು ಮುಂಚಿತವಾಗಿ ಮೇಲಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕು  ಎಂದು ಎರಡೂ ಜಿಲ್ಲೆಗಳ ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *