ರಾಮನಗರ: ರಾಮನಗರದಲ್ಲಿ ರಾಮೋತ್ಸವ ಆಚರಿಸುವುದು ನಿಶ್ಚಿತ. ಇದು ಸಾಮಾನ್ಯ ಮಟ್ಟದ ಕಾರ್ಯಕ್ರಮವಲ್ಲ. ಇತಿಹಾಸ ಪುಟದಲ್ಲಿ ದಾಖಲಾಗಬಹುದಾದಂತ ಉತ್ಸವವಾಗಲಿದೆ ಎಂದು ರಾಮನಗರ ರಾಮೋತ್ಸವದ ಬಗ್ಗೆ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಮಾಹಿತಿ ನೀಡಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಶಾಸಕ ಇಕ್ಬಾಲ್, ರಾಮೋತ್ಸವ ಕಾರ್ಯಕ್ರಮ ಯಾವುದೇ ಕಾರಣಕ್ಕೂ ರಾಜಕೀಯ ಕಾರ್ಯಕ್ರಮವಲ್ಲ. ಈ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮ ಹಾಗೂ ಎಲ್ಲಾ ವರ್ಗಗಳ ಜನ ಭಾಗಿಯಾಗಲಿದ್ದಾರೆ. ಈ ಉತ್ಸವದ ಬಗ್ಗೆ ಸಂಬಂಧಪಟ್ಟವರ ಜೊತೆಗೆ ಈಗಾಗಲೇ ಚರ್ಚೆ ನಡೆಯುತ್ತಿದೆ. ರಾಮನಗರ ರಾಮನ ಪಾದ ಸ್ಪರ್ಶವಾಗಿರುವಂತ ಜಾಗವಾಗಿರುವ ಕಾತಣ, ಇಲ್ಲೊಂದು ಭವ್ಯವಾದ ಮಂದಿರ ಕಟ್ಟಿ, ಪೂಜಿಸಲು ಸಂಸದರಾದ ಡಿಕೆ ಸುರೇಶ್ ಯೋಜನೆಯೊಂದನ್ನು ರೂಪಿಸುತ್ತಾ ಇದ್ದಾರೆ ಎಂದಿದ್ದಾರೆ.
ಇನ್ನು ಈ ವಿಚಾರವಾಗಿ ಬಜೆಟ್ ನಲ್ಲೂ ಅನುದಾನ ಮೀಸಲಿಡುವುದಕ್ಕೆ ಸಂಸದ ಸುರೇಶ್ ಅವರು, ಸರ್ಕಾರ ಬಳಿ ಮನವಿ ಮಾಡಲಿದ್ದಾರಂತೆ. ಈ ಸಂಬಂಧ ಶಾಸಕ ಇಕ್ಬಾಲ್ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಅಯೋಧ್ಯೆಯಲ್ಲಿ ರಾಮನ ಮಂದಿರದೊಳಗೆ ಬಾಲ ರಾಮ ಪ್ರತಿಷ್ಠಾಪನೆಗೊಂಡಿದ್ದಾನೆ. ಈ ಬೆನ್ನಲ್ಲೇ ರಾಮನಗರದಲ್ಲೂ ರಾಮೋತ್ಸವ ಮಾಡಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಇನ್ನು ಕಳೆದ ಕೆಲ ದಿನಗಳಿಂದಾನು ರಾಮನಗರದ ರಾಮನ ಜಪ ಕಾಂಗ್ರೆಸ್ ನಾಯಕರಲ್ಲಿ ಜೋರಾಗಿಯೇ ಇದೆ.
ಅಯೋಧ್ಯೆಯಲ್ಲಿ ನಿನ್ನೆಯಷ್ಟೇ ರಾಮಲಲ್ಲಾ ಮೂರ್ತಿಯ ಉದ್ಘಾಟನೆಯಾಗಿದೆ. ಇಂದು ಕೂಡ ರಾಮನನ್ನು ಕಣ್ತುಂಬಿಕೊಳ್ಳಲು ಅಯೋಧ್ಯೆಯಲ್ಲಿ ಜನಸ್ತೋಮವೇ ನೆರೆದಿದೆ. ದಿನೇ ದಿನೇ ಅಯೋಧ್ಯೆಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಅದರ ಜೊತೆಗೆ ರಾಜ್ಯದಲ್ಲೂ ರಾಮನ ಮಂದಿರ ಉದ್ಘಾಟನೆ, ರಾಮ ಧ್ಯಾನ ಜೋರಾಗಿಯೇ ಆಗುತ್ತಿದೆ.