ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಈ ಸುಂದರ ಗಳಿಗೆಗೆ ತಾರೆಯರ ಮೆರಗು ಕೂಡ ಇತ್ತು. ಬಾಲಿವುಡ್, ಸ್ಯಾಂಡಲ್ ವುಡ್ ಸ್ಟಾರ್ ಗಳಿಗೂ ಆಹ್ವಾನ ನೀಡಲಾಗಿತ್ತು. ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಅಯೋಧ್ಯೆಗೆ ಧಾವಿಸಿ, ಬಾಲರಾಮನ ಭಕ್ತಿಗೆ ಪಾತ್ರರಾಗಿದ್ದಾರೆ. ಈ ವೇಳೆ ಬಾಲಿವುಡ್ ನಟಿ ಆಲಿಯಾ ಭಟ್ ಧರಿಸಿದ್ದ ಸೀರೆ ಎಲ್ಲರ ಗಮನ ಸೆಳೆದಿದೆ.
ನಮ್ಮ ರಾಜ್ಯದ ಮೈಸೂರು ಸಿಲ್ಕ್ ಸೀರೆಯನ್ನು ಧರಿಸಿದ್ದರು ಆಲಿಯಾ ಭಟ್. ರೇಷ್ಮೆ ಸೀರೆಯಲ್ಲಿ ಆಲಿಯಾ ಭಟ್ ಅತ್ಯಂತ ಸುಂದರವಾಗಿ ಕಾಣುತ್ತಿದ್ದರು. ಮೈತುಂಬಾ ಸೆರಗು ಹೊದ್ದು, ಕೂದಲಿಗೆ ತುರ್ಬನ್ನು ಹಾಕಿ, ಪಕ್ಕಾ ಗೃಹಿಣಿಯಂತೆ ಕಾಣಿಸಿಕೊಂಡಿದ್ದರು. ನಮ್ಮ ಕರ್ನಾಟಕದ ಮೈಸೂರು ಸಿಲ್ಕ್ ಸೀರೆಯಲ್ಲಿ ರಾಮಾಯಣವನ್ನೇ ಪ್ರದರ್ಶನ ಮಾಡಿದ್ದು ಎಲ್ಲರ ಗಮನವನ್ನು ಸೆಳೆದಿತ್ತು. ಸೀರೆಯಲ್ಲಿ ರಾಮಾಯಣದ ಕಲಾಕೃತಿಗಳು ಎದ್ದು ಕಾಣಿಸುತ್ತಿತ್ತು.
ಅಷ್ಟಕ್ಕೂ ಈ ಸೀರೆ ಸಿದ್ಧವಾಗಿದ್ದು ಎಲ್ಲಿ, ಹೇಗೆ ಎಂಬುದರ ಮಾಹಿತಿ ಇಲ್ಲಿದೆ. ಆಲಿಯಾ ಭಟ್ ತೊಟ್ಟಿದ್ದ ರಾಮಾಯಣ ಕಥೆಯನ್ನು ಸಾರುವ ಸೀರೆಯನ್ನು ಸಿದ್ದ ಮಾಡಿದ್ದು, ಮಾಧುರ್ಯ ಡಿಸೈನರ್. ನೀಲಿ ಬಣ್ಣದಿಂದ ಈ ಸೀರೆ ಕೂಡಿದ್ದು, ಸಿದ್ಧತೆ ಮಾಡಲು ಹತ್ತು ದಿನಗಳಾಗಿವೆ. ಈ ಬಗ್ಗೆ ಮಾಧುರ್ಯ ಡಿಸೈನ್ ಮುಖ್ಯಸ್ಥರಾದ ಭಾರತಿ ಹರೀಶ್ ಮಾತನಾಡಿ,’ರಾಮ ಮಂದಿರ ಉದ್ಘಾಟನೆಗೆ ಆಲಿಯಾ ಭಟ್, ಕರ್ನಾಟಕದ ಮೈಸೂರು ಸಿಲ್ಕ್ ಸೀರೆಯನ್ನು ಧರಿಸಿದ್ದರು. ಸೀರೆಯ ಪಲ್ಲುವಿನಲ್ಲಿ ರಾಮಾಯಣದ ಕಲಾಕೃತಿಯನ್ನು ಕೈಯಿಂದ ಮುದ್ರಿಸಲಾಗಿದೆ. ರಾಮನು ಶಿವಧನುಷನ್ನು ಮುರಿಯುವುದು, ರಾಮನನ್ನು ಕಾಡಿಗೆ ಹೋಗುವಂತೆ ಹೇಳುವುದು, ಗಂಗೆಯ ಸೇತುವೆ, ಚಿನ್ನದ ಜಿಂಕೆ ಹೀಗೆ ರಾಮಾಯಣದಲ್ಲಿ ಬರುವ ಪ್ರಮುಖ ಅಂಶಗಳನ್ನು ಇಲ್ಲಿ ಎಳೆಎಳೆಯಾಗಿ ಬಿಡಿಸಲಾಗಿದೆ. ಹೀಗಾಗಿ ಎಲ್ಲರ ಚಿತ್ತ ಆಲಿಯಾ ಭಟ್ ಸೀರೆಯತ್ತ ನೆಟ್ಟಿದೆ.