ಅಸ್ಸಾಂನಲ್ಲಿ ರಾಹುಲ್‍ಗಾಂಧಿ ನ್ಯಾಯ ಯಾತ್ರೆ ಮೇಲೆ ಕಲ್ಲು ತೂರಾಟ : ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪ್ರತಿಭಟನೆ

2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.23 :  ಮಣಿಪುರದಿಂದ ಆರಂಭಗೊಂಡಿರುವ ರಾಹುಲ್‍ಗಾಂಧಿರವರ ನ್ಯಾಯ ಯಾತ್ರೆ ಮೇಲೆ ಅಸ್ಸಾಂನಲ್ಲಿ ಬಿಜೆಪಿ ಗೂಂಡಾಗಳು ದಾಳಿ ನಡೆಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮಾಜಿ ಸಚಿವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಹೆಚ್.ಆಂಜನೇಯ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ನರೇಂದ್ರಮೋದಿ ದೇಶದ ಪ್ರಧಾನಿಯಾಗಿ ಹತ್ತು ವರ್ಷಗಳಾದರೂ ಒಂದು ದಿನವೂ ವಿರೋಧ ಪಕ್ಷದವರನ್ನು ಕರೆದು ಮಾತನಾಡುವ ಪ್ರಯತ್ನ ಮಾಡಿಲ್ಲ. ಕಾಂಗ್ರೆಸ್ ಯುವ ನಾಯಕ ರಾಹುಲ್‍ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಜನ ಸಾಮಾನ್ಯರ ಸಮಸ್ಯೆ ಆಲಿಸಿದ್ದನ್ನು ಕೋಮುವಾದಿ ಬಿಜೆಪಿ.ಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಅಸ್ಸಾಂನಲ್ಲಿ ರಾಹುಲ್‍ಗಾಂಧಿರವರ ಕಾರು ಹಾಗೂ ಬಸ್‍ನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರಜಾಪ್ರಭುತ್ವವನ್ನು ಗೌರವಿಸುವವರೆಲ್ಲಾ ರಾಹುಲ್ ನ್ಯಾಯಯಾತ್ರೆಗೆ ಬೆಂಬಲಿಸುತ್ತಿದ್ದಾರೆಂದು ಹೇಳಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ ಅಸ್ಸಾಂನಲ್ಲಿ ರಾಹುಲ್‍ಗಾಂಧಿರವರ ಕಾರು ಹಾಗೂ ಬಸ್ಸಿನ ಮೇಲೆ ಬಿಜೆಪಿ.ಯ ಗೂಂಡಾಗಳು ಕಲ್ಲು ತೂರಿರುವುದು ಭಾರತವೇ ನಾಚಿ ತಲೆ ತಗ್ಗಿಸುವಂತ ಕೃತ್ಯ. ಡಾ.ಬಿ.ಆರ್.ಅಂಬೇಡ್ಕರ್, ಜವಾಹರಲಾಲ್ ನೆಹರು ಇವರುಗಳದ್ದೆಲ್ಲಾ ಶಾಂತಿಯುತವಾದ ಹೋರಾಟ. ಬಿಜೆಪಿ.ಯವರ ಗೂಂಡಾ ವರ್ತನೆಯನ್ನು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟಿರುವ ಪ್ರತಿಯೊಬ್ಬರೂ ಯೋಚಿಸಲೇಬೇಕು. ಆರ್.ಎಸ್.ಎಸ್. ಕೃಪಾ ಪೋಷಿತ ಬಿಜೆಪಿ.ಯ ಅಕ್ರಮವನ್ನು ಜನರಿಗೆ ತಿಳಿಸುವ ಕೆಲಸ ರಾಹುಲ್‍ಗಾಂಧಿ ಮಾಡುತ್ತಿರುವುದರಿಂದ ಯಾತ್ರೆಯನ್ನು ಮೊಟಲುಗೊಳಿಸುವ ಕುತಂತ್ರ ನಡೆಸುತ್ತಿದ್ದಾರೆ. ಬಹಿರಂಗ ಚರ್ಚೆ ಮಾಡುವ ಧೈರ್ಯವಿಲ್ಲದೆ ಇಂತಹ ಕ್ಷುಲ್ಲಕ ಕೆಲಸಕ್ಕೆ ಕೈಹಾಕಿರುವುದು ಬಿಜೆಪಿ.ಗರ ಹಿಟ್ಲರ್ ಆಡಳಿತವನ್ನು ತೋರಿಸುತ್ತದೆ ಎಂದರು.

ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ರಾಹುಲ್‍ಗಾಂಧಿರವರ ನ್ಯಾಯಯಾತ್ರೆಯ ಮೇಲೆ ಅಸ್ಸಾಂನಲ್ಲಿ ಬಿಜೆಪಿ. ಬೆಂಬಲಿತ ಗೂಂಡಾಗಳು ಹಲ್ಲೆಗೆ ಯತ್ನಿಸಿರುವುದನ್ನು ನಾವುಗಳು ಖಂಡಿಸುತ್ತೇವೆ. ರಾಹುಲ್‍ರವರ ಭಾರತ್ ಜೋಡೋ ಯಾತ್ರೆಯನ್ನು ಸಹಿಸದ ಕೋಮುವಾದಿಗಳು ಇಂತಹ ಹೀನ ಕೃತ್ಯಕ್ಕೆ ಕೈಹಾಕುತ್ತಿರುವುದನ್ನು ದೇಶದ ಜನ ಗಮನಿಸುತ್ತಿದ್ದಾರೆ. ಎಲ್ಲಾ ಜಾತಿ ಧರ್ಮದವರನ್ನು ಪ್ರೀತಿಸುವ ನಾವುಗಳು ನಿಜವಾದ ಹಿಂದುಗಳು, ಬಿಜೆಪಿ.ಯವರು ಡೋಂಗಿ ಹಿಂದುಗಳು ಎಂದು ವ್ಯಂಗ್ಯವಾಡಿದರು.

ಕೆಡಿಪಿ. ಸದಸ್ಯ ರಾಜಣ್ಣ ಮಾತನಾಡಿ ರಾಹುಲ್‍ಗಾಂಧಿ ನ್ಯಾಯಯಾತ್ರೆ ಮೇಲೆ ನಡೆದ ಬಿಜೆಪಿ. ದಾಳಿ ಅತ್ಯಂತ ಖಂಡನೀಯ. ಕಾಂಗ್ರೆಸ್ ಪಕ್ಷದ ಪ್ರತಿ ಹೋರಾಟವನ್ನು ಬಿಜೆಪಿ. ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಯೋಜನೆಗಳನ್ನು ಬಿಜೆಪಿ. ನಮ್ಮದೆಂದು ಹೇಳಿಕೊಳ್ಳುತ್ತ ದೇಶದ ಜನರನ್ನು ದಿಕ್ಕುತಪ್ಪಿಸುತ್ತಿರುವುದರ ವಿರುದ್ದ ಯುವ ಜನಾಂಗ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ನೇರ್ಲಗುಂಟೆ ರಾಮಪ್ಪ ಮಾತನಾಡುತ್ತ ರಾಹುಲ್‍ಗಾಂಧಿ ಯಾತ್ರೆ ಕಂಡು ಬಿಜೆಪಿ.ಗೆ ನಡುಕ ಉಂಟಾಗಿದೆ. ದೇಶದ ಪ್ರಧಾನಿ ಮೋದಿ ತಿರುಗಾಡಿದ ಕಡೆಗೆಲ್ಲಾ ಬಿಜೆಪಿ. ಸೋತಿದೆ. ರಾಹುಲ್ ಸಂಚರಿಸಿದ ಕ್ಷೇತ್ರದಲ್ಲೆಲ್ಲಾ ಕಾಂಗ್ರೆಸ್ ಗೆದ್ದಿದೆ. ಅದಕ್ಕಾಗಿಯೇ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 135 ಸೀಟುಗಳು ಲಭಿಸಲು ಕಾರಣವಾಯಿತು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಉಪಾಧ್ಯಕ್ಷರುಗಳಾದ ಶ್ರೀಮತಿ ನಜ್ಮತಾಜ್, ಜಿ.ಎಸ್.ಕುಮಾರ್‍ಗೌಡ, ಎಸ್.ಎನ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತ ನಂದಿನಿಗೌಡ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೇಣುಕ ಶಿವು, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಹೆಚ್.ಅಂಜಿನಪ್ಪ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಸ್ವಾಮಿ, ಸೈಯದ್ ಖುದ್ದೂಸ್, ಹನೀಸ್, ಪವಿತ್ರ, ತುಳಸಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *