ಅಯೋಧ್ಯೆ: ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ನೆರವೇರಿಸಿದ್ದಾರೆ. ಆಹ್ವಾನಿತರಿಗೆ ಮಾತ್ರ ನಿನ್ನೆಯ ದಿನ ನೇರವಾಗಿ ಬಾಲರಾಮನನ್ನು ಕಣ್ತುಂಬಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಇನ್ನುಳಿದಂತೆ ಇಡೀ ದೇಶದ ಜನ ಲೈವ್ ಮೂಲಕ ರಾಮಲಲ್ಲಾನನ್ನು ನೋಡಿ ಸಂತಸಗೊಂಡಿದ್ದಾರೆ. ಭಕ್ತಿಯಿಂದ ಕುಳಿತಲ್ಲಿಯೇ ಕೈ ಮುಗಿದಿದ್ದಾರೆ. ಆದರೆ ಒಂದು ಸಲವಾದರೂ ಹತ್ತಿರದಿಂದ ರಾಮಲಲ್ಲಾನನ್ನು ನೋಡುವಾಸೆ ಎಲ್ಲರಿಗೂ ಇದ್ದೆ ಇದೆ. ಅದಕ್ಕೆ ಇಂದಿನಿಂದಾನೇ ಅವಕಾಶವೂ ಸಿಕ್ಕಿದೆ.
ಅಯೋಧ್ಯೆಯಲ್ಲಿ 5 ಡಿಗ್ರಿ ಚಳಿ ಇದೆ. ಆದರೂ ಕೊರೆಯುವ ಚಳಿಯಲ್ಲೂ ರಾಮನ ಭಕ್ತರು ರಾಮಲಲ್ಲಾನ ದರ್ಶನಕ್ಕಾಗಿ ಕ್ಯೂ ನಿಂತಿದ್ದಾರೆ. ಇಂದಿನಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿದ್ದು, ರಾಮಮಂದಿರದ ಒಳಗೆ ಹೋಗುವುದಕ್ಕೆ ಒಂದಷ್ಟು ದಾಖಲೆಗಳ ಅವಶ್ಯಕತೆ ಇದೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಧಾವಿಸುತ್ತಿರುವ ಕಾರಣ, ಅಯೋಧ್ಯೆಯಲ್ಲಿ ನೂಕು ನುಗ್ಗಲಾಗಿದೆ. ಭದ್ರತೆಯ ನಡುವೆ ಭಕ್ತರು ದರ್ಶನ ಪಡೆಯುತ್ತಿದ್ದಾರೆ.
ರಾಮಮಂದಿರದಲ್ಲಿ ಸಾರ್ವಜನಿಕರಿಗೆ ದರ್ಶನ ನೀಡಲು ಸಮಯ ನಿಗದಿ ಮಾಡಲಾಗಿದೆ. ಅದರಲ್ಲಿ ಬೆಳಗ್ಗೆ 7ರಿಂದ 11.30ರ ತನಕ ಮಾತ್ರ ದರ್ಶನಕ್ಕೆ ಅವಕಾಶ ಒದಗಿಸಲಾಗಿದೆ. ಮತ್ತೆ ಮಧ್ಯಾಹ್ನ 2ರಿಂದ ಸಂಜೆ 7ರ ತನಕವೂ ದರ್ಶನಕ್ಕೆ ಅವಕಾಶವಿದೆ. ಇನ್ನುಳಿದ ಸಮಯದಲ್ಲಿ ದೇವಾಲಯದ ಬಾಗಿಲನ್ನು ಬಂದ್ ಮಾಡಲಾಗಿರುತ್ತದೆ. ನಿತ್ಯ ಬೆಳಗ್ಗೆ ಶೃಂಗಾರ ಆರತಿ ಸಂಜೆ ಸಂಧ್ಯಾ ಆರತಿ ನಡೆಯಲಿದೆ. ಆರತಿಯ ದೃಶ್ಯವನ್ನು ಭಕ್ತರು ಕಣ್ತುಂಬಿಕೊಳ್ಳಬಹುದು. ಆದರೆ ಇದಕ್ಕೆ ಆರತಿ ಪಾಸ್ ಪಡೆಯಬೇಕು. ಆನ್ಲೈನ್ ಹಾಗೂ ಆಫ್ ಲೈನ್ ನಲ್ಲಿ ಪಾಸ್ ಗಳನ್ನು ಪಡೆಯಬಹುದಾಗಿದೆ. ಟ್ರಸ್ಟ್ ನ ವೆಬ್ ಸೈಟ್ ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡು ಪಾಸ್ ಪಡೆಯಬಹುದು.